ಮಡಿಕೇರಿ, ಫೆ. 27: ದೇವರಪುರ ಗ್ರಾ.ಪಂ. ವ್ಯಾಪ್ತಿಯ ಹೆಬ್ಬಾಲೆ ಭದ್ರಗೋಳ ಹಾಡಿಯ ನಿವಾಸಿಗಳಿಗೆ ಕಾನೂನಿನ ತೊಡಕು ನಿವಾರಣೆಯೊಂದಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲಾಗುವದು ಎಂದು ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಭರವಸೆ ನೀಡಿದ್ದಾರೆ.
ಇಲ್ಲಿನ ಗಾಂಧಿ ಮಂಟಪ ಎದುರು ಕಳೆದ ನಾಲ್ಕೈದು ದಿನಗಳಿಂದ ಅಹೋರಾತ್ರಿ ಮುಷ್ಕರ ನಿರತರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು, ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯುವ ಭರವಸೆ ನೀಡಿದರು.
ಆದರೆ ಧರಣಿ ನಿರತರು, ಮೊದಲು ಕುಡಿಯುವ ನೀರು ಹಾಗೂ ವಸತಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಬಳಿಕವಷ್ಟೇ ಮುಷ್ಕರ ಹಿಂಪಡೆಯುವದಾಗಿ ಪಟ್ಟು ಹಿಡಿದರು. ಈ ಬಗ್ಗೆ ಅಗತ್ಯ ಕ್ರಮದ ಆಶ್ವಾಸನೆ ನೀಡಿ ಮೇಲ್ಮನೆ ಸದಸ್ಯರು ನಿರ್ಗಮಿಸಿದರು. ಹಾಡಿ ನಿವಾಸಿಗಳು ಇಂದು ಅಧಿಕ ಸಂಖ್ಯೆಯಲ್ಲಿ ಮುಷ್ಕರದಲ್ಲಿ ಪಾಲ್ಗೊಂಡಿದ್ದು, ತಾ. 28 ರಂದು ಮುಂದುವರಿಸುವದಾಗಿ ಘೋಷಿಸಿದರು.