ಮಡಿಕೇರಿ, ಫೆ. 27: ಮಡಿಕೇರಿ ನಗರಸಭೆಯ 2018-19ನೇ ಸಾಲಿನ ಮುಂಗಡ ಪತ್ರವನ್ನು ಇಂದು ಜರುಗಿದ ನಗರಸಭೆಯ ತುರ್ತು ವಿಶೇಷ ಸಭೆಯಲ್ಲಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಂಡಿಸಿದರು. ಆರಂಭಿಕ ಶಿಲ್ಕು ರೂ. 9,84,74,033 ಮೊತ್ತದೊಂದಿಗೆ ಮುಂದಿನ ವಾರ್ಷಿಕ ಅವಧಿಗೆ ರೂ. 56,03,00,063 ಮೊತ್ತದ ನಿರೀಕ್ಷಿತ ಆದಾಯ ಸೇರಿದಂತೆ ಒಟ್ಟು ರೂ. 65,87,74,096 ಮೊತ್ತದ ಮುಂಗಡ ಪತ್ರವನ್ನು ಪ್ರಕಟಿಸಲಾಯಿತು. ಆದರೆ ಅಂಗೀಕಾರ ಪಡೆಯದೆ ಸಭೆ ಮುಂದೂಡಬೇಕಾಯಿತು.
ಅಂತೆಯೇ 2018-19ನೇ ಸಾಲಿನ ವಾರ್ಷಿಕ ನಿರೀಕ್ಷಿತ ಖರ್ಚು ರೂ. 62,37,47,063 ಮೊತ್ತದೊಂದಿಗೆ, ಅಂತಿಮವಾಗಿ ಉಳಿಕೆ ರೂ. 3,50,27,033 ಮೊತ್ತದ ಆದಾಯದ ಮುಂಗಡ ಪತ್ರವನ್ನು ಅಧ್ಯಕ್ಷರು ಮಂಡಿಸಿದರು. ಆದರೆ ಇಂದಿನ ಮುಂಗಡ ಪತ್ರ ಮಂಡನೆಯ ಸಭೆಯನ್ನು ಕೇವಲ ಮೂರ್ನಾಲ್ಕು ದಿನಗಳ ಕಾಲಾವಕಾಶದೊಂದಿಗೆ ಕಾಟಾಚಾರಕ್ಕೆ ಕರೆಯಲಾಗಿದೆ ಎಂದು ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರು ಆಕ್ಷೇಪಿಸಿ ಸದನದಿಂದ ಹೊರ ನಡೆದರು.
ಮುಂಗಡ ಪತ್ರ ಮಂಡನೆ ಸಭೆಯ ಆರಂಭದಲ್ಲಿ ಕೇವಲ ಆಡಳಿತಾರೂಢ ಕಾಂಗ್ರೆಸ್ ಹಾಗೂ ಎಸ್‍ಡಿಪಿಐ ಸದಸ್ಯರು ಮಾತ್ರ ಆಸೀನರಾಗಿದ್ದರು. ಅಲ್ಲದೆ ಪಕ್ಷದ ಐವರು ನಾಮನಿರ್ದೇಶನ ಸದಸ್ಯರು ಪಾಲ್ಗೊಂಡಿದ್ದರು. ನಿಯಮಾನುಸಾರ ಪೌರಾಯುಕ್ತೆ ಶುಭ, ಸದಸ್ಯರು ಸ್ವಾಗತಿಸಿ ಮುಂಗಡ ಪತ್ರ ಮಂಡನೆಗೆ ಸಹಕಾರ ಕೋರಿದರು.
ಈ ವೇಳೆಗೆ ಸಭೆಗೆ ಆಗಮಿಸಿದ ಜೆಡಿಎಸ್ ಬೆಂಬಲಿತ ಹಿರಿಯ ಸದಸ್ಯ ಕೆ.ಎಂ. ಗಣೇಶ್, ಬಜೆಟ್ ಮಂಡನೆಗೆ ಆಕ್ಷೇಪಿಸುತ್ತಾ, ಸಾಕಷ್ಟು ಸಮಯಾವಕಾಶದೊಂದಿಗೆ ಎಲ್ಲ ಸದಸ್ಯರನ್ನು ಮತ್ತು ಮಡಿಕೇರಿಯ ಜನತೆಯ ಅಭಿಪ್ರಾಯಕ್ಕೆ ಮನ್ನಣೆ ನೀಡುವ ದಿಸೆಯಲ್ಲಿ ಮುಂದಿನ ಸಾಲಿನ ಬಜೆಟ್ ಮಂಡನೆ ಮಾಡುವಂತೆ ಸಲಹೆ ನೀಡಿದರು. ಅಷ್ಟರಲ್ಲಿ ಆಡಳಿತಾರೂಢ ಕಾಂಗ್ರೆಸ್ ಸದಸ್ಯ ಹೆಚ್.ಎಂ. ನಂದಕುಮಾರ್, ಎಸ್‍ಡಿಪಿಐನ ಅಮೀನ್ ಮೊಯ್ಸಿನ್ ಆಕ್ಷೇಪಿಸುತ್ತಾ, ಇಲ್ಲಿ ಯಾರೂ ರಾಜಕೀಯ ಮಾಡದೆ ಜನತೆಯ ಹಿತದೃಷ್ಟಿಯಿಂದ ಮುಂಗಡ ಪತ್ರ ಮಂಡನೆಯಾಗಬೇಕೆಂದು ಪ್ರತಿಪಾದಿಸಿದರು.
ಈ ವೇಳೆಗೆ ಮತ್ತೆ ತಮ್ಮ ಅಸಮಾಧಾನ ಹೊರಗೆಡವಿದ ಕೆ.ಎಂ. ಗಣೇಶ್ ನಗರದ ಅಭಿವೃದ್ಧಿಗೆ ಎಲ್ಲರಿಗೂ ಕಾಳಜಿಯಿದ್ದು, ತಾನು ಕೂಡ ಮುಂಗಡ ಪತ್ರಕ್ಕೆ ವಿರೋಧಿಸುತ್ತಿಲ್ಲವೆಂದೂ, ಸಾಕಷ್ಟು ಕಾಲಮಿತಿಯೊಂದಿಗೆ ನಿಯಮಾನುಸಾರ ಮಂಡನೆಯೊಂದಿಗೆ ಸುದೀರ್ಘ ಚರ್ಚೆಗೆ ಅವಕಾಶಕ್ಕಾಗಿ ಕೋರುತ್ತಿರುವದಾಗಿ ಸ್ಪಷ್ಟನೆಯೊಂದಿಗೆ, ತರಾತುರಿಯ ನಿರ್ಧಾರ ಪ್ರತಿಭಟಿಸಿ ಸಭೆಯಿಂದ ಹೊರ ನಡೆದರು. ಮಾಜಿ ಉಪಾಧ್ಯಕ್ಷೆ ಹಾಗೂ ಸದಸ್ಯೆ ಲೀಲಾ ಶೇಷಮ್ಮ ಕೂಡ ಹೊರ ನಡೆದರು.
ಆ ವೇಳೆಗೆ ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಸಹಿತ ಬಿಜೆಪಿ ಸದಸ್ಯರು ಸಭಾಂಗಣ ಪ್ರವೇಶಿಸಿದರು. ಸದಸ್ಯರುಗಳಾದ ಪಿ.ಡಿ. ಪೊನ್ನಪ್ಪ, ಕೆ.ಎಸ್. ರಮೇಶ್, ಉಣ್ಣಿಕೃಷ್ಣ ಮಾತನಾಡಿ, ಕೇವಲ ಒಂದೆರಡು ದಿನದ ಕಾಲಾವಕಾಶದಲ್ಲಿ ಮುಂಗಡ ಪತ್ರ ಮಂಡಿಸುವ ಮೂಲಕ ಸದಸ್ಯರುಗಳನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೆಂದು ತಕರಾರು ತೆಗೆದರು.
ಅಲ್ಲದೆ ಸದಸ್ಯರುಗಳ ಆಕ್ಷೇಪಣೆ ನಡುವೆ ಮುಂಗಡ ಪತ್ರ ಮಂಡಿಸಿದರೆ ಕಾನೂನು ಹೋರಾಟ ನಡೆಸುವದಾಗಿ ಘೋಷಿಸಿ, ಜಿಲ್ಲಾಧಿಕಾರಿಗಳಿಗೆ ದೂರು ನೀಡುವದಾಗಿಯೂ ಸುಳಿವು ಇತ್ತರು. ಆ ವೇಳೆಗೆ ಮೌನ ಮುರಿದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಬಜೆಟ್ ಮಂಡನೆಗೆ ಮುಂದಾದರು.
ಜಿಲ್ಲಾಧಿಕಾರಿಗೆ ದೂರು: ಇತ್ತ ಪಟ್ಟು ಸಡಿಲಿಸಿದ ಬಿಜೆಪಿ ಸದಸ್ಯರು, ಒಂದು ವೇಳೆ ಬಜೆಟ್ ಮಂಡಿಸಿದರೂ ಬೇರೊಂದು ದಿನ ಆ ಬಗ್ಗೆ ಸಭೆ ಕರೆದು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದಾಗ, ಆಯುಕ್ತೆ ಶುಭ ಮೂರು ದಿನಗಳಲ್ಲಿ ಮತ್ತೆ ಮುಂಗಡ ಪತ್ರದ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಲು ಸಭೆ ಆಯೋಜಿಸುವದಾಗಿ ಭರವಸೆ ನೀಡಿದರು. ಆ ವೇಳೆಗೆ ವಿಶೇಷ ಸಭೆಯಿಂದ ಹೊರ ನಡೆದ ಬಿಜೆಪಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ನಗರಸಭೆಯ ಕಾರ್ಯವೈಖರಿ ಬಗ್ಗೆ ದೂರು ಸಲ್ಲಿಸಿದರು.
ಇತ್ತ ಬಜೆಟ್ ಮಂಡನೆ: ಇತ್ತ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಆಡಳಿತಾರೂಢ ಕಾಂಗ್ರೆಸ್ ಹಾಗೂ ಎಸ್‍ಡಿಪಿಐ ಸದಸ್ಯರ ಸ್ವಾಗತದೊಂದಿಗೆ ಬಜೆಟ್ ಮಂಡಿಸಿದಾಗ ಮೇಜು ತಟ್ಟಿ ಹರ್ಷ ವ್ಯಕ್ತಗೊಂಡಿತು. ಈ ವೇಳೆ ನಗರಸಭೆ ಶಾಲೆಗಳ ಗೌರವ ಶಿಕ್ಷಕರಿಗೆ ಗೌರವಧನ ಕಲ್ಪಿಸುವದು, ಈ ಹಿಂದೆ ನಗರಸಭಾ ಸಿಬ್ಬಂದಿಗಳಾಗಿದ್ದು, ರೂ. ಒಂದು ಕೋಟಿಯಷ್ಟು ದುರುಪಯೋಗ ಎಸಗಿರುವ ಸಜಿತ್‍ಕುಮಾರ್ ಹಾಗೂ ಸ್ವಾಮಿ ಎಂಬವರ ವಿರುದ್ಧ ಕಾನೂನು ಕ್ರಮದ ಕುರಿತು ಪ್ರಸ್ತಾಪಗೊಂಡಿತು. ಸದಸ್ಯರುಗಳಾದ ನಂದಕುಮಾರ್, ತಜಸ್ಸುಂ, ಪ್ರಕಾಶ್ ಆಚಾರ್ಯ ಮುಂಗಡ ಪತ್ರಕ್ಕೆ ಮೆಚ್ಚುಗೆಯೊಂದಿಗೆ ಅಧ್ಯಕ್ಷರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಆಕ್ಷೇಪ: ಈ ನಡುವೆ ಇಂದಿನ ಸಭೆಯಲ್ಲಿ ಜೆಡಿಎಸ್ ಬೆಂಬಲಿತ ಹಾಗೂ ಬಿಜೆಪಿ ಉಪಾಧ್ಯಕ್ಷರ ಸಹಿತ ಎಲ್ಲ 8 ಸದಸ್ಯರು ಸಭಾ ನಿರ್ಣಯ ಕಡತದಲ್ಲಿ ಸಹಿ ಮಾಡಿಲ್ಲವೆಂದು ಆರೋಪಿಸಿದ ಕಾಂಗ್ರೆಸ್ ಸದಸ್ಯರು, ಅವರುಗಳ ಅಭಿಪ್ರಾಯಗಳನ್ನು ಅಂಗೀಕರಿಸದಂತೆಯೂ, ಕಡತದಲ್ಲಿ ನಮೂದಿಸದಂತೆಯೂ ಆಗ್ರಹಿಸಿದರು. ಈ ಬಗ್ಗೆ ಅಧ್ಯಕ್ಷರು ಸಮ್ಮತಿ ಸೂಚಿಸಿದರು. ಮಾರ್ಚ್ 1 ರಂದು ಬೆಳಿಗ್ಗೆ 11 ಗಂಟೆಗೆ ಮುಂಗಡ ಪತ್ರ ಅಂಗೀಕಾರ ನಿರ್ಣಯ ಕೈಗೊಳ್ಳಲು ಸಭೆ ಕರೆಯಲಾಗುವದೆಂದು ಕಾವೇರಮ್ಮ ಸೋಮಣ್ಣ ಪ್ರಕಟಿಸಿದ ಮೇರೆ ಸಭೆ ಮುಕ್ತಾಯಗೊಂಡಿತು.