ವರದಿ ವಾಸು

ಸಿದ್ದಾಪುರ, ಫೆ. 27: ಜಿಲ್ಲೆಯ ಗ್ರಾಮೀಣ ಭಾಗದ ಕ್ರಿಕೆಟ್ ಆಟಗಾರರ ಬಹುನಿರೀಕ್ಷಿತ ಕೊಡಗು ಚಾಂಪಿಯನ್ಸ್ ಲೀಗ್ (ಕೆಸಿಎಲ್) 3ನೇ ಆವೃತ್ತಿಯ ಕ್ರಿಕೆಟ್ ಉತ್ಸವಕ್ಕೆ ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘ ಸಕಲ ಸಿದ್ಧತೆಯಲ್ಲಿದ್ದು, ಕಳೆದ ಎರಡು ವರ್ಷಗಳಿಂದ ಅದ್ದೂರಿಯಾಗಿ ನಡೆದ ಕ್ರಿಕೆಟ್ ಉತ್ಸವವನ್ನು ಈ ಬಾರಿ ಮತ್ತಷ್ಟು ವರ್ಣರಂಜಿತವಾಗಿ ಆಯೋಜಿಸಲು ಕೆಸಿಎಲ್ ಸಮಿತಿ ಮುಂದಾಗಿದೆ.

ಏ. 8 ರಿಂದ ಇಲ್ಲಿನ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ಆಟಗಾರರಿಗಾಗಿ ಜಿಲ್ಲೆಯಾದ್ಯಂತ ಅರ್ಜಿಯನ್ನು ಕೆಸಿಎಲ್ ಸಮಿತಿ ವಿತರಿಸಲಾಗಿದ್ದು, ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಮಾ. 5 ರ ತನಕ ಕಾಲಾವಕಾಶವನ್ನು ನೀಡಲಾಗಿದೆ. ಅರ್ಜಿ ಸಲ್ಲಿಸಿದ ಎಲ್ಲಾ ಆಟಗಾರರ ಹೆಸರುಗಳನ್ನು ಬಿಡ್ಡಿಂಗ್ ಪ್ರಕ್ರಿಯೆಗೆ ಸೇರಿಸಲಾಗುವದು. ಮಾ. 13 ರಂದು ಐಪಿಎಲ್ ಮಾದರಿಯಲ್ಲೇ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಸಿದ್ದಾಪುರದಲ್ಲಿ ನಡೆಯಲಿದೆ.

ಈ ಬಾರಿ 12 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, 5 ದಿನಗಳ ಕಾಲ ನಡೆಯುವ ಕ್ರಿಕೆಟ್ ಉತ್ಸವದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡ ಲಕ್ಷಕ್ಕೂ ಅಧಿಕ ಬಹುಮಾನವನ್ನು ಪಡೆಯಲಿದೆ. ಕೆಸಿಎಲ್ ಪ್ರಥಮ ಆವೃತ್ತಿಯಲ್ಲಿ 12 ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ರೂ. 1 ಲಕ್ಷ ಬಹುಮಾನದೊಂದಿಗೆ ಟೀಂ ಕೂಲ್ ಸಿದ್ದಾಪುರ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ದ್ವಿತೀಯ ಆವೃತ್ತಿಯಲ್ಲಿ 14 ತಂಡಗಳ ಪೈಕಿ ಕೂರ್ಗ್ ಲಯನ್ಸ್ ತಂಡ ರೂ. 1,11,111 ಬಹುಮಾನದೊಂದಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು.

ಈ ಕ್ರಿಕೆಟ್ ಪಂದ್ಯಾಟಕ್ಕಾಗಿ ಜಿಲ್ಲೆಯಾದ್ಯಂತ ಇರುವ ಆಟಗಾರರಲ್ಲಿ 300ಕ್ಕೂ ಹೆಚ್ಚು ಆಟಗಾರರು ಪ್ರತಿ ವರ್ಷ ಅರ್ಜಿ ಸಲ್ಲಿಸುತ್ತಿದ್ದು, ಅದರಲ್ಲಿ 200ಕ್ಕೂ ಹೆಚ್ಚು ಮಂದಿ ಹರಾಜಾಗುವದರ ಮೂಲಕ ವಿವಿಧ ತಂಡಗಳಲ್ಲಿ ಸ್ಥಾನ ಪಡೆದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಲಭಿಸಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‍ಸಿಎ) ನುರಿತ ತೀರ್ಪುಗಾರರು ಪಂದ್ಯಾಟದಲ್ಲಿ ಭಾಗವಹಿಸುತ್ತಾರೆ.

ಸರಕಾರದ ನೆರವು ಅಗತ್ಯ: ಪ್ರಥಮ ಆವೃತ್ತಿಯಲ್ಲಿ ಸರಕಾರದಿಂದ ಯಾವದೇ ಆರ್ಥಿಕ ನೆರವು ಪಡೆಯಲು ವಿಫಲವಾಗಿದ್ದ ಸಮಿತಿ, ದ್ವಿತೀಯ ಆವೃತ್ತಿಗೆ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಮುಖಾಂತರ ರೂ. 35 ಸಾವಿರ ಹಣ ಕೆಸಿಎಲ್ ಕ್ರೀಡಾಕೂಟಕ್ಕೆ ದೊರೆಯಿತಾದರೂ ಎರಡೂ ವರ್ಷಗಳಲ್ಲಿ ಅತ್ಯಂತ ಅದ್ದೂರಿ ಹಾಗೂ ವೈವಿದ್ಯಮಯದಿಂದ ಪಂದ್ಯಾಟವನ್ನು ಆಯೋಜಿಸಿದ ಕೆಸಿಎಲ್ ಸಮಿತಿಯು ಸ್ವಲ್ಪ ಮಟ್ಟಿಗೆ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಯಿತು. ಈ ಬಾರಿಯ ಕ್ರೀಡಾಕೂಟಕ್ಕೆ ಸರಕಾರದಿಂದ ಮತ್ತಷ್ಟು ನೆರವು ಸಿಗುವ ವಿಶ್ವಾಸದಲ್ಲಿ ಕ್ರೀಡಾಕೂಟವನ್ನು ವಿಜೃಂಭಣೆಯಿಂದ ನಡೆಸಲು ಕೆಸಿಎಲ್ ಸಮಿತಿ ಮುಂದಾಗಿದೆ ಎಂದು ಸಮಿತಿ ಅಧ್ಯಕ್ಷ ಸುರೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ.