ಕುಶಾಲನಗರ, ಫೆ. 27: ರಾಷ್ಟ್ರೀಯ ಪಕ್ಷಗಳಿಂದ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯದ ನಡುವೆ ಜನರಿಗೆ ಅಭದ್ರತೆ ಉಂಟಾಗಿದೆ ಎಂದು ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯ್ಯದ್ ಮುಹೀದ್ ಅಲ್ತಾಫ್ ಹೇಳಿದರು.ಕುಶಾಲನಗರದ ರೈತ ಸಹಕಾರ ಭವನದಲ್ಲಿ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಅಲ್ಪಸಂಖ್ಯಾತರ ಘಟಕದ ಆಶ್ರಯದಲ್ಲಿ ನಡೆದ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರಕಾರ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸಮನಾದ ಕೋಮುವಾದ ಪಕ್ಷಗಳಾಗಿವೆ ಎಂದು ಆರೋಪಿಸಿದರು.
ಶಿಕ್ಷಣ ಮೂಲಕ ಮಾತ್ರ ಅಲ್ಪಸಂಖ್ಯಾತರ ಏಳಿಗೆ ಸಾಧ್ಯ ಹೊರತು ಸರಕಾರದ ಭಾಗ್ಯಗಳಿಂದ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಪಕ್ಷದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್‍ಪೂವಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳು ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ನಾಗರಿಕರಂತೆ ಪರಿಗಣಿಸುತ್ತಿರುವದು ವಿಷಾದನೀಯ ಎಂದರು.
ಸರಕಾರದ ಯಾವದೇ ಯೋಜನೆಗಳು ಅಲ್ಪಸಂಖ್ಯಾತರ ಮನೆಗೆ ತಲುಪುತ್ತಿಲ್ಲ. ನಿರಂತರವಾಗಿ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಮೇಲೆ ಗದಾಪ್ರಹಾರ ಮಾಡುತ್ತಿದೆ. ಪಕ್ಷದಲ್ಲಿ ಪ್ರಾತಿನಿಧ್ಯ ನೀಡುವಲ್ಲಿ ರಾಷ್ಟ್ರೀಯ ಪಕ್ಷಗಳು ಕಡೆಗಣನೆ ಮಾಡಿರುವದು ಕಾಣಬಹುದು. ಅಲ್ಪಸಂಖ್ಯಾತರು ಕಾಂಗ್ರೆಸ್‍ಗೆ ಮತ ನೀಡಿದಲ್ಲಿ ಬಿಜೆಪಿಗೆ ಪರೋಕ್ಷ ಬೆಂಬಲ ನೀಡಿದಂತಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಜಾತಿ ಆಧಾರದಲ್ಲಿ ಆಡಳಿತ ನಡೆಸಲು
(ಮೊದಲ ಪುಟದಿಂದ) ಕಾಂಗ್ರೆಸ್ ಮತ್ತು ಬಿಜೆಪಿ ಹುನ್ನಾರ ನಡೆಸುತ್ತಿದ್ದು ಜನತೆಗೆ ವ್ಯವಸ್ಥೆ ಮೇಲೆ ನಂಬಿಕೆ ಕಳೆದು ಭ್ರಮನಿರಸನ ಉಂಟಾಗಿದೆ ಎಂದರು.
ಮಾಜಿ ಸಚಿವ ಹಾಗೂ ಮಡಿಕೇರಿ ಕ್ಷೇತ್ರ ಅಭ್ಯರ್ಥಿ ಬಿ.ಎ. ಜೀವಿಜಯ ಮಾತನಾಡಿ, 1983 ರ ರಾಜಕೀಯ ಪ್ರಹಸನ ಇದೀಗ 2018 ರಲ್ಲಿ ಮರುಕಳಿಸುವದು ಖಚಿತ ಎಂದರಲ್ಲದೆ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಜಾತ್ಯತೀತ ಜನತಾದಳ ಯೋಜನೆ ರೂಪಿಸಿದೆ ಎಂದರು.
ಹಣಬಲದ ರಾಜಕೀಯವನ್ನು ತಡೆಯುವದರೊಂದಿಗೆ ಸರಕಾರದ ಬೊಕ್ಕಸವನ್ನು ಲೂಟಿ ಮಾಡುವದನ್ನು ತಪ್ಪಿಸಬೇಕಾಗಿದೆ. ಜೆಡಿಎಸ್ ಆಡಳಿತಕ್ಕೆ ಬಂದಲ್ಲಿ ಮೂಲಭೂತ ಸೌಕರ್ಯ ಗಳು, ಶೈಕ್ಷಣಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುವದು ಎಂದರು.
ಕ್ರಿಶ್ಚಿಯನ್ ವಿಂಗ್ ರಾಜ್ಯಾಧ್ಯಕ್ಷ ವಿಲ್ಸನ್ ರೆಡ್ಡಿ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯಗಳು ಯಾವದೇ ಪಕ್ಷಕ್ಕೆ ಸೀಮಿತವಲ್ಲ. ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಬದಲಿಸಲು ಅಲ್ಪಸಂಖ್ಯಾತರ ನಿರ್ಣಯವೇ ಅಂತಿಮ ಎಂದರು.
ಪಕ್ಷದ ಅಲ್ಪಸಂಖ್ಯಾತರ ರಾಜ್ಯ ಕಾರ್ಯದರ್ಶಿ ಶಾಹಿದ್ ಅನ್ವರ್ ಮಾತನಾಡಿ, ಪಕ್ಷ ಪೂರ್ಣ ಅಧಿಕಾರಕ್ಕೆ ಬಂದಲ್ಲಿ ಅಲ್ಪಸಂಖ್ಯಾತರು ಅಥವಾ ದಲಿತರು ಉಪ ಮುಖ್ಯಮಂತ್ರಿ ಸ್ಥಾನ ಪಡೆಯುವದು ಖಚಿತ; ರಾಜ್ಯದಲ್ಲಿ ಮುಸ್ಲಿಂ ವಿಶ್ವವಿದ್ಯಾನಿಲಯ ಪ್ರಾರಂಭಕ್ಕೆ ಜೆಡಿಎಸ್ ಚಿಂತನೆ ಹರಿಸಿದೆ ಎಂದರು.
ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಪ್ರೇಮ್‍ಕುಮಾರ್ ಮಾತನಾಡಿ, ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಜಯದ ಬಗ್ಗೆ ಆಶಾಭಾವ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಹೆಚ್.ಯು.ಇಸಾಕ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಪಕ್ಷದ ಪದವೀಧರ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ಅಶ್ವಿನ್ ಪೆರೇರ, ಪಕ್ಷದ ರಾಜ್ಯ ಸಮಿತಿ ಉಪಾಧ್ಯಕ್ಷ ಎಂ.ಎಂ.ಶರೀಫ್, ಪ್ರಮುಖರಾದ ಕೆಎಂಬಿ ಗಣೇಶ್, ಮನ್ಸೂರ್ ಅಲಿ, ಪರಿಶಿಷ್ಟ ಪಂಗಡ ಅಧ್ಯಕ್ಷ ಎಸ್.ಎನ್.ರಾಜಾರಾವ್, ಪ್ರಮುಖರಾದ ಸಿ.ಎಲ್.ವಿಶ್ವ, ಸತೀಶ್ ಜೋಯಪ್ಪ, ತಮ್ಮಯ್ಯ, ಪುಟ್ಟರಾಜು, ಜಾರ್ಜ್, ಡೇವಿಡ್, ವಿಠಲ್‍ಗೌಡ, ಕಾಂತರಾಜು, ಎಂ.ಎಸ್.ರಾಜೇಶ್, ಜಯಮ್ಮ, ಮತೀನ್ ಸೇರಿದಂತೆ ವಿವಿಧ ಘಟಕಗಳ ಪ್ರಮುಖರು ಇದ್ದರು.ಇದೇ ಸಂದರ್ಭ ವಿವಿಧ ಪಕ್ಷಗಳಿಂದ ಕಾರ್ಯಕರ್ತರು ಪಕ್ಷ ತೊರೆದು ಗಣ್ಯರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.