ಮಡಿಕೇರಿ ಫೆ.26 : ಅಂತರ್ರಾಷ್ಟ್ರೀಯ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಂಸ್ಥೆ (ಐಡಿಯಾ) ಹಾಗೂ ವೀರಾಜಪೇಟೆಯ ಕೊಡಗು ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಎರಡು ದಿನಗಳ ಅಂತರ್ರಾಷ್ಟ್ರೀಯ ಮಟ್ಟದ ದಂತ ವೈದ್ಯಕೀಯ ವಿಚಾರ ಸಂಕಿರಣ ‘ಕ್ವೆಸ್ಟ್-2018’ ತಾ.27 ಮತ್ತು 28ರಂದು ವೀರಾಜಪೇಟೆಯ ಕೊಡಗು ದಂತ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾಲೇಜಿನ ಉಪ ಪ್ರಾಂಶುಪಾಲ ಡಾ|| ಶಶಿಧರ್, ತಾ.27ರ ಪೂರ್ವಾಹ್ನ 10ಗಂಟೆಗೆ ಜಪಾನ್‍ನ ಟ್ಸ್ರುಮಿ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ|| ಸತೋಶಿ ನಾಗಸಾಕ ಅವರು ಕಾರ್ಯಾಗಾರವನ್ನು ಉದ್ಘಾಟಿಸಲಿದ್ದು, ಯುರೋಪಿಯನ್ ಮತ್ತು ಏಷ್ಯನ್ ವಿವಿಗಳಾದ ಬುದಾಪೆಸ್ಟ್, ಹಂಗೇರಿ,ಸಿಯೋಲ್, ದಕ್ಷಿಣ ಕೊರಿಯಾ, ಮಲೇಷಿಯಾ, ಜಪಾನ್ ಮುಂತಾದೆಡೆಯ ಸುಮಾರು 150ಕ್ಕೂ ಅಧಿಕ ವಿದೇಶಿ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದು ಹೇಳಿದರು.
ಎರಡು ದಿನಗಳ ಈ ವಿಚಾರಸಂಕಿರಣದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದು, ರಾಷ್ಟ್ರ ಹಾಗೂ ಅಂತರ್ರಾಷ್ಟ್ರಿಯ ಮಟ್ಟದ ಸುಮಾರು 600ಕ್ಕೂ ಅಧಿಕ ಮಂದಿ ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಕೆಲವರು ನೇರವಾಗಿ ಪ್ರಬಂಧಗಳನ್ನು ಮಂಡಿಸಿದರೆ ಮತ್ತೆ ಕೆಲವರು ಅಂಚೆ ಮೂಲಕವೂ ತಮ್ಮ ಪ್ರಬಂಧಗಳನ್ನು ಕಳುಹಿಸಿಕೊಡಲಿದ್ದಾರೆ ಎಂದು ತಿಳಿಸಿದರು.
ವಿಚಾರಸಂಕಿರಣದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಸಂಶೋಧಕರು ಉಪನ್ಯಾಸ ನೀಡಲಿದ್ದು, ಯುವ ಜನಾಂಗವನ್ನು ವೈಜ್ಞಾನಿಕ ಸಂಶೋಧನೆಯ ಕಡೆಗೆ ಸೆಳೆಯಲಿದ್ದಾರೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಕೊಡಗು ದಂತ ವೈದ್ಯಕೀಯ ಸಂಸ್ಥೆಯು ‘ಸ್ಲೀಪ್ ಡಿಸೋರ್ಡರ್ ಬ್ರೇದಿಂಗ್’ ಕೇಂದ್ರವನ್ನು ವೀರಾಜಪೇಟೆಯ ಕಂಜಿತಂಡ ಕುಶಾಲಪ್ಪ ಕ್ಯಾಂಪಸ್‍ನಲ್ಲಿ ಆರಂಭಿಸಲಾಗುತ್ತಿದ್ದು, ಫೆ. 27ರ ಪೂರ್ವಾಹ್ನ 11 ಗಂಟೆಗೆ ಬೆಂಗಳೂರಿನ ಏರ್‍ಫೋರ್ಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‍ನ ಮುಖ್ಯಸ್ಥರಾದ ಏರ್ ಕಮಾಂಡರ್ ಬಾಲಕೃಷ್ಣ ಜಯನ್ ಅವರು ಈ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.