*ಗೋಣಿಕೊಪ್ಪಲು, ಫೆ. 26: ಪಂಚಾಯಿತಿ ವ್ಯಾಪ್ತಿಯ ಅಭಿವೃದ್ದಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲು ಕರೆದ ಸಾಮಾನ್ಯ ಸಭೆಯನ್ನು ತಿರಸ್ಕರಿಸಿ ಅಧ್ಯಕ್ಷರು ಹೊರನಡೆದ ಘಟನೆ ನಡೆದಿದೆ. ಪಟ್ಟಣದ ಅಭಿವೃದ್ದಿ ಕಾರ್ಯಗಳ ಬಗ್ಗೆ ಗ್ರಾ.ಪಂ. ಸಭಾಂಗಣದಲ್ಲಿ ಇಂದು ಪಂಚಾಯಿತಿ ಅಧ್ಯಕ್ಷೆ ಸೆಲ್ವಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಸಲು ಸರ್ವ ಸದಸ್ಯರನ್ನು ಆಹ್ವಾನಿಸಲಾಗಿತ್ತು.

ಸಭೆ ಪ್ರಾರ್ಥನೆಯ ಮೂಲಕ ಪ್ರಾರಂಭವಾಗಿ ಕಾರ್ಯಸೂಚಿಗಳ ಬಗ್ಗೆ ಚರ್ಚೆ ನಡೆಸಬೇಕಾದ ಸಂದರ್ಭ ಕೇಂದ್ರ ಸಚಿವರ ಕಾರ್ಯಕ್ರಮ ಇದೆ ಎಂದು ಹೇಳಿ ಅಧ್ಯಕ್ಷರು ಸಭೆಯಿಂದ ತೆರಳಿದರು. ಇದರೊಂದಿಗೆ ಬಿ.ಜೆ.ಪಿ. ಬೆಂಬಲಿತ ಸದಸ್ಯರುಗಳು ಸಹ ಸಭೆಯಿಂದ ಹೊರ ಹೋಗಿದ್ದು, ಕಾಂಗ್ರೆಸ್ ಬೆಂಬಲಿತ ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು. ಪಂಚಾಯಿತಿ ಅಭಿವೃದ್ದಿಯ ಬಗ್ಗೆ ಗಮನ ಹರಿಸದೆ ರಾಜಕೀಯ ನಡೆಸುತ್ತಾ ಜನರ ಭರವಸೆ ಹಾಗೂ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದ್ದಾರೆ ಮತ್ತು ಸಭೆ ನಡುವಳಿಯನ್ನು ದಿಕ್ಕರಿಸಿ ಅಗೌರವ ತೊರಿದ್ದಾರೆ ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳಾದ ಕುಲ್ಲಚಂಡ ಪ್ರಮೋದ್ ಗಣಪತಿ, ಚೆಪ್ಪುಡೀರ ಧ್ಯಾನ್ ಸುಬ್ಬಯ್ಯ, ಜಮ್ಮಡ ಕೆ. ಸೋಮಣ್ಣ, ಕಾಟಿ ಮುರುಗ, ಮಂಜುಳ ಮತ್ತು ಬಿ.ಎನ್. ಪ್ರಕಾಶ್ ಅವರುಗಳು ಇವರ ನಡುವಳಿಕೆಯ ಬಗ್ಗೆ ಬೇಸರ ವ್ಯಕ್ತಪಡಿಸಿ ಮಾದ್ಯಮಗಳೇ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಪಂಚಾಯಿತಿಯ ಅಧ್ಯಕ್ಷರ ಹಾಗೂ ಕೆಲವು ಬಿ.ಜೆ.ಪಿ. ಸದಸ್ಯರ ವರ್ತನೆಗಳ ಬಗ್ಗೆ ಟೀಕೆ ಮಾಡಿದ್ದಾರೆ.

ಕಾರ್ಯಸೂಚಿಯ ಪ್ರಕಾರ ಕಳೆದ ಸಭೆಯ ನಡುವಳಿಯನ್ನು ಓದುವದು, ಕಂದಾಯ ಬೇಡಿಕೆ ಮತ್ತು ವಸೂಲಿ ಜಮಾ ಖರ್ಚಿನ ಒಪ್ಪುವ ವಿಚಾರ, ನಮೂನೆ 9, 11ಎ, 11ಬಿ ಖಾತೆ ಬದಲಾವಣೆ ಅರ್ಜಿಗಳ ಪರಿಶೀಲನೆ ಕಟ್ಟಡ ಪರವಾನಗೆ ಕೋರಿ ಬಂದ ಅರ್ಜಿಗಳ ಪರಿವೀಕ್ಷಣೆ, ಭೂಪರಿವರ್ತನೆಗೆ ನಿರೀಕ್ಷಣಾ ಪ್ರಮಾಣ ಪತ್ರ ಕೋರಿ ಬಂದ ಅರ್ಜಿ, 2018-19ನೇ ಸಾಲಿನ ಹರಾಜಿನ ಬಗ್ಗೆ ಗ್ರಾ.ಪಂ. ವ್ಯಾಪ್ತಿಯ ಬಡಾವಣೆಗಳ ಬಗ್ಗೆ, ಸರ್ಕಾರಿ ಹಾಗೂ ಸಾರ್ವಜನಿಕ ಅಹವಾಲು ಅರ್ಜಿಗಳು, ಸಾಮಾನ್ಯ ಲೈಸೆನ್ಸ್ ಪರಿಕ್ಷರಣೆ ಮತ್ತು ಅಧ್ಯಕ್ಷರ ಅನುಮತಿಯ ಮೇರೆ ಇತರೆ ವಿಷಯಗಳು ಎಂಬ ವಿಚಾರವಾಗಿ ಚರ್ಚೆಗಳು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಸಭೆ ನಡೆಸಬೇಕಾಗಿದೆ. ಆದರೆ ಅಧ್ಯಕ್ಷರು ಬೇರೊಂದು ಸಭೆ ಇದೆ ಎಂದು ಸಾಮಾನ್ಯ ಸಭೆಯನ್ನೇ ತಿರಸ್ಕರಿಸಿ ಹೊರಹೋಗಿದ್ದಾರೆ. ಇದರೊಂದಿಗೆ ಬಿ.ಜೆ.ಪಿ. ಬೆಂಬಲಿತ ಸದಸ್ಯರುಗಳಾದ ರತಿ ಅಚ್ಚಪ್ಪ, ರಾಮಕೃಷ್ಣ, ಸುರೇಶ್ ರೈ, ಸಾವಿತ್ರಿ ಅವರುಗಳು ಸಭಾ ಮರ್ಯಾದೆಯನ್ನು ಬಿಟ್ಟು ಹೊರನಡೆದಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಸದಸ್ಯರುಗಳಾದ ಮಂಜುಳ, ಪ್ರಭಾವತಿ, ರಾಜಶೇಖರ್, ಚೆಪ್ಪುಡೀರ ದ್ಯಾನ್ ಸುಬ್ಬಯ್ಯ, ಬಿ.ಎನ್. ಪ್ರಕಾಶ್, ಯಾಸ್ಮಿನ್, ಮಮಿತಾ, ಸುಲೈಕಾ ಅವರುಗಳು ಹಾಜರಿದ್ದರು.