ಶನಿವಾರಸಂತೆ, ಫೆ. 25: ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಂಕ್ರೀಟ್‍ಕರಣ ಹಾಗೂ ರಸ್ತೆ ಕಾಮಗಾರಿಗಳನ್ನು ನಿರ್ವಹಿಸಲು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಮ್ ಮುಖ್ಯಮಂತ್ರಿಯವರ ವಿಶೇಷ ಪ್ಯಾಕೇಜ್‍ನಿಂದ ರೂ. 36 ಲಕ್ಷ ಅನುದಾನ ನೀಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ರಾಜಮ್ಮ ರುದ್ರಯ್ಯ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಮಾಲಂಬಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ, ಪರಿಶಿಷ್ಟ ಪಂಗಡಗಳ ಕಾಲೋನಿ ರಸ್ತೆ ಹಾಗೂ ಹೊಸಳ್ಳಿ ಗ್ರಾಮದ ಪರಿಶಿಷ್ಟ ಕಾಲೋನಿ ರಸ್ತೆಗೆ ಕಾಂಕ್ರೀಟ್‍ಕರಣ ನಡೆಯಲಿದೆ. ಮೆಣಸ ಗ್ರಾಮ, ಅಮ್ನಳ್ಳಿ ಗ್ರಾಮ ಹಾಗೂ ಚಿಕ್ಕಕಣಗಾಲು ಗ್ರಾಮಗಳಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ. ಈ ಅವಶ್ಯ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಕೋರಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಉಸ್ತುವಾರಿ ಸಚಿವರು ಅನುದಾನ ನೀಡಿದ್ದಾರೆ ಎಂದು ರಾಜಮ್ಮ ರುದ್ರಯ್ಯ ತಿಳಿಸಿದ್ದಾರೆ.