ಮಡಿಕೇರಿ, ಫೆ. 25: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ, ಹಿಂದು ಸಂಘಟನೆಗಳ ಕಾರ್ಯಕರ್ತರ ನಿರಂತರ ಹತ್ಯೆಯನ್ನು ಖಂಡಿಸಿ, ಬರುವ ಮಾರ್ಚ್ 3 ರಂದು ಕೊಡಗಿನ ಕುಶಾಲನಗರದಿಂದ ದಕ್ಷಿಣ ಕನ್ನಡದ ಸುರತ್ಕಲ್ ತನಕ ಭಾರತೀಯ ಜನತಾ ಪಾರ್ಟಿ ಜನಜಾಗೃತಿ ಯಾತ್ರೆ ನಡೆಸಲಿದೆ.

ಕೊಡಗಿನ ಹೆಬ್ಬಾಗಿಲು ಕುಶಾಲನಗರದಲ್ಲಿ ಅಂದು ಬೆಳಿಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಪಾದಯಾತ್ರೆಯೊಂದಿಗೆ ಜನಜಾಗೃತಿ ಜಾಥಾವನ್ನು ಉದ್ಘಾಟಿಸಲಿದ್ದು, ಸಂಸದ ಪ್ರತಾಪ್ ಸಿಂಹ, ಕೊಡಗಿನ ಶಾಸಕರು, ಬಿಜೆಪಿ ಮುಖಂಡರು, ವಿವಿಧ ಜನಪ್ರತಿನಿಧಿಗಳ ಸಹಿತ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ಗೊತ್ತಾಗಿದೆ.

ಇನ್ನೊಂದೆಡೆ ಕೇಂದ್ರದ ಮತ್ತೋರ್ವ ಸಚಿವ ಅನಂತ ಕುಮಾರ್ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲದಿಂದÀ ಮಾ. 3 ರಂದು ಪಾದಯಾತ್ರೆ ಆರಂಭಿಸಲಿದ್ದು, ಉಭಯ ಕಡೆಯಿಂದ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿ ಮತ್ತು ಹತ್ಯೆ ಖಂಡಿಸಿ ಆಗಮಿಸಲಿರುವ ಯಾತ್ರೆಯು ಸುರತ್ಕಲ್‍ನಲ್ಲಿ ಸಂಗಮಗೊಳ್ಳಲಿದೆ ಎಂದು ಮಾಹಿತಿ ಲಭಿಸಿದೆ. ಮಾ. 6 ರಂದು ಅಲ್ಲಿ ರಾಜ್ಯ ಸರಕಾರದ ವಿರುದ್ಧ ಬೃಹತ್ ಆಂದೋಲನದೊಂದಿಗೆ ಬಿಜೆಪಿ ರಾಷ್ಟ್ರೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ‘ಶಕ್ತಿ’ಗೆ ಸುಳಿವು ಲಭಿಸಿದೆ.