ಸೋಮವಾರಪೇಟೆ, ಫೆ. 25 : ಸ್ಥಳೀಯ ಐತಿಹಾಸಿಕ ಆನೆಕೆರೆಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ, ನಗರ ಗೌಡ ಒಕ್ಕೂಟ ಹಾಗೂ ಹರಪಳ್ಳಿ ರವೀಂದ್ರ ಬೆಂಬಲಿಗರು ಒಟ್ಟಾಗಿ ಸೇರಿ ಸ್ವಚ್ಛಗೊಳಿಸಿದರು.
ಪಟ್ಟಣದ ಮಧ್ಯದಲ್ಲಿರುವ ಆನೆಕೆರೆ ಪಟ್ಟಣ ಪಂಚಾಯಿತಿಯ ಪ್ರಮುಖ ಕೆರೆಯಾಗಿದ್ದು, ಕಳೆದ ಹಲವು ವರ್ಷಗಳಿಂದ ನೀರಿಲ್ಲದೆ ಪಾಳು ಬಿದ್ದಿದೆ. ಕೆರೆಯ ಸುತ್ತ ಆವರಣ ಗೋಡೆ ದುಸ್ಥಿತಿಯಲ್ಲಿದ್ದು, ಗಿಡಗಂಟಿಗಳು ಬೆಳೆದು ಮುಚ್ಚಿ ಹೋಗಿತ್ತು. ಈ ಹಿನ್ನೆಲೆ ಸಾರ್ವಜನಿಕರು ಬೆಳಿಗ್ಗೆಯಿಂದಲೇ ಸ್ವಚ್ಛತಾ ಕಾರ್ಯ ನಡೆಸಿ ಸುತ್ತಲೂ ಬೆಳೆದಿದ್ದ ಕಾಡನ್ನು ಸ್ವಚ್ಛಗೊಳಿಸಿದರು.
ಈ ಸಂದರ್ಭ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಅಧ್ಯಕ್ಷ ಸಿ.ಸಿ. ನಂದ ಮಾತನಾಡಿ, ಪಟ್ಟಣ ವ್ಯಾಪ್ತಿಯ ಎಲ್ಲ ಗೌರಿ ಗಣೇಶ ಮೂರ್ತಿಗಳನ್ನು ಪೂಜಿಸಿ ಇಲ್ಲಿಯೇ ತಂದು ವಿಸರ್ಜಿಸಲಾಗುತ್ತಿತ್ತು. ಆದರೆ, ಕೆರೆಯಲ್ಲಿ ಈ ಹಿಂದೆ ಅವೈಜ್ಞಾನಿಕವಾಗಿ ಹೂಳೆತ್ತಿದ್ದರಿಂದ ನೀರು ನಿಲ್ಲದ ಸ್ಥಿತಿ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿವೆ. ನಂತರ ಇದನ್ನು ದುರಸ್ತಿ ಪಡಿಸಲು ಯಾರೂ ಮುಂದಾಗಲಿಲ್ಲ ಎಂದರು.
ಕೆಲವರು ತಮ್ಮ ಮನೆಯಲ್ಲಿ ಹಾಳಾಗಿರುವ ದೇವರ ಫೋಟೋಗಳನ್ನು ತಂದು ಇಲ್ಲಿಗೆ ತುಂಬಿಸಿದರೆ, ಮದ್ಯಪಾನಿಗಳು ಇಲ್ಲಿಯೇ ಮದ್ಯಪಾನ ಮಾಡಿ ಖಾಲಿ ಬಾಟಲಿಗಳನ್ನು ಕೆರೆಗೆ ಎಸೆದಿದ್ದಾರೆ. ಪಟ್ಟಣ ಪಂಚಾಯಿತಿ ಇದರ ಸ್ವಚ್ಛತೆಗೆ ಮುಂದಾಗಿಲ್ಲ ಎಂದು ದೂರಿದರು.
ಹರಪಳ್ಳಿ ರವೀಂದ್ರ ಮಾತನಾಡಿ, ಕೂಡಲೇ ಆನೆಕೆರೆ ಜಾಗವನ್ನು ಸರ್ವೇ ಮಾಡಿಸಿ, ಒತ್ತುವರಿಯಾಗಿರುವ ಸ್ಥಳವನ್ನು ತೆರವುಗೊಳಿಸಿ ಕೆರೆ ಅಭಿವೃದ್ಧಿಗೆ ಸಂಬಂಧಿಸಿದವರು ಮುಂದಾಗಬೇಕೆಂದು ಒತ್ತಾಯಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಪದಾಧಿಕಾರಿಗಳಾದ ಬಾಲಕೃಷ್ಣ ಪೂಜಾರಿ, ಪರಮೇಶ, ಖಾದರ್, ಕೆ.ಜಿ. ಸುರೇಶ್, ಹಾಲಪ್ಪ, ಪ್ರಕಾಶ್, ನಗರ ಗೌಡ ಒಕ್ಕೂಟದ ಅಧ್ಯಕ್ಷ ಎಂ.ಎಂ. ಪ್ರಕಾಶ್‍ಕುಮಾರ್, ಸಿ.ಪಿ. ಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.