ದಿಡ್ಡಳ್ಳಿಯಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬಗಳು ನಾಪತ್ತೆ

ವೀರಾಜಪೇಟೆ, ಫೆ. 24: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಎಂಬಲ್ಲಿ ಸರ್ವೆ ನಂ. 370/1 ರಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗಾಗಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿಯಲ್ಲಿ 180 ನಿವೇಶನಗಳನ್ನು ವಿಂಗಡಿಸಿ ಸುಮಾರು 100 ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿತ್ತು. ಈಗ ವಿದ್ಯುತ್ ಕಂಬಗಳು ಕಾಣೆಯಾಗಿದ್ದು, ನಿವೇಶನಕ್ಕೆ ದಿಕ್ಕು-ದೆಶೆ ಇಲ್ಲದಂತಾಗಿದೆ ಎಂದು ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಂ. ಪರಮೇಶ್ವರ್ ಆರೋಪಿಸಿದ್ದಾರೆ. ಬಾರಿಕಾಡು ನಿವೇಶನದ ಜಾಗಕ್ಕೆ ಭೇಟಿ ನೀಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್, ಈ ಜಾಗಕ್ಕೆ ಬೇನಾಮಿ ವ್ಯಕ್ತಿಗಳು ಬೇಲಿಯನ್ನು ನಿರ್ಮಿಸಿದ್ದಾರೆ. ದಿಡ್ಡಳ್ಳಿ ನಿರಾಶ್ರಿತರಿಗೆ ಮೀಸಲಿಟ್ಟ ನಿವೇಶನದ ಕಾಮಗಾರಿಗೆ ಸರಕಾರ ರೂ. 41,53,000 ವೆಚ್ಚ ಮಾಡಿದೆ. ಆದರೆ ದಿಡ್ಡಳ್ಳಿ ನಿರಾಶ್ರಿತರು ಈ ನಿವೇಶನ ಪಡೆಯಲು ಈ ತನಕ ಬಾರದರಿಂದ ದಿಡ್ಡಳ್ಳಿ ನಿವೇಶನ ವೆಚ್ಚ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಆರೋಪಿಸಿದರು. ಬಾರಿಕಾಡು ಪೈಸಾರಿಯಲ್ಲಿ ಸರಕಾರ ದಿಡ್ಡಳ್ಳಿ ನಿರಾಶ್ರಿತರ ನಿವೇಶನಕ್ಕಾಗಿ ಏಳೂವರೆ ಎಕರೆ ಜಾಗವನ್ನು ಮೀಸಲಿಟ್ಟು 180 ನಿವೇಶನಗಳನ್ನಾಗಿ ಪರಿವರ್ತಿಸಲಾಗಿತ್ತು. ನಿವೇಶನಗಳ ಜಾಗಕ್ಕೆ ಇತ್ತೀಚೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರಾಜ್ಯದ ಕಂದಾಯ ಸಚಿವರು ಭೇಟಿ ನೀಡಿ ಬಾರಿಕಾಡುವಿನಲ್ಲಿ ಸಭೆ ನಡೆಸಿ ಈ ಜಾಗದಲ್ಲಿ ನೀರಿನ ಸೌಲಭ್ಯ, ಚರಂಡಿ ನಿರ್ಮಾಣ, ವಿದ್ಯುತ್ ಅಳವಡಿಕೆ ಹಾಗೂ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆದೇಶಿಸಿದ್ದರು. ಆದರೆ ಸಚಿವರು ಹಿಂತಿರುಗಿದ ನಂತರ ಅಧಿಕಾರಿಗಳು ಇತ್ತ ಮುಖಮಾಡಿಲ್ಲ ಎಂದು ದೂರಿದ ಪರಮೇಶ್ವರ, ದಿಡ್ಡಳ್ಳಿ ನಿರಾಶ್ರಿತರು ಈ ಜಾಗವನ್ನು ನಿರಾಕರಿಸಿದ್ದಾರೆ ಎಂಬ ಸುಳಿವು ಪಂಚಾಯಿತಿಗೆ ದೊರೆತಿದ್ದು, ಈ ನಿವೇಶನಗಳನ್ನು ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ-ಪಂಗಡಗಳ ಬಡ ಕಾರ್ಮಿಕರಿಗೆ ಸೂರು ಭಾಗ್ಯ ಯೋಜನೆಯಡಿ ವಿತರಿಸುವಂತೆ ಒತ್ತಾಯಿಸಿದ್ದಾರೆ. ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಚೋಟು ಬಿದ್ದಪ್ಪ ಮಾತನಾಡಿ, ಪೈಸಾರಿ ಜಾಗವನ್ನು 180 ನಿವೇಶನಗಳನ್ನಾಗಿ ಪರಿವರ್ತಿಸುವಾಗ ಅಧಿಕಾರಿಗಳು ಬಡ ಕುಟುಂಬಗಳ ಹೆಸರಿನಲ್ಲಿ ಭಾರೀ ಅವ್ಯವಹಾರ ನಡೆಸಿದ್ದಾರೆ. ಈಗ ಅಧಿಕಾರಿಗಳು ಈ ನಿವೇಶನಗಳ ಕುರಿತು ಯಾವದೇ ಕಾಳಜಿ ವಹಿಸುತ್ತಿಲ್ಲ. ಇಲ್ಲಿ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡಿದ್ದಾರೆ. ಈ ಹಿಂದೆ ಬಾರಿಕಾಡಿಗೆ ಹಿಂದಿನ ಜಿಲ್ಲಾಧಿಕಾರಿ ಭೇಟಿ ನೀಡಿದಾಗ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತ 171 ಮಂದಿಯ ಅರ್ಜಿಗಳಿದ್ದು ಇವರಿಗೂ ನಿವೇಶನಗಳನ್ನು ನೀಡುವಂತೆ ಮನವಿ ಸಲ್ಲಿಸಲಾಗಿತ್ತು ಎಂದರು. ಬಾರಿಕಾಡು ಪೈಸಾರಿಯ ನಿವೇಶನಗಳÀ ಬಳಿಯಿದ್ದ ವಿದ್ಯುತ್ ಕಂಬಗಳನ್ನು ಎಲ್ಲಿಗೆ ಸಾಗಿಸಲಾಗಿದೆ ಎಂದು ಸಂಬಂಧಿಸಿದ ಯಾವ ಅಧಿಕಾರಿಗೂ ತಿಳಿದಿಲ್ಲ! ಇದರ ಮಾಹಿತಿಯನ್ನು ತಕ್ಷಣ ಗ್ರಾಮಸ್ಥರಿಗೆ ತಿಳಿಸದಿದ್ದರೆ ಕಳವು ಎಂದು ಪರಿಗಣಿಸಿ ದೂರು ನೀಡಬೇಕಾದೀತು ಎಂದು ಪರಮೇಶ್ವರ್ ಎಚ್ಚರಿಸಿದ್ದಾರೆ.

ಈ ಸಂದರ್ಭ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಕಿರಣ್ ಕುಮಾರ್, ಬಿ. ಸುಧಿ ಇತರರು ಉಪಸ್ಥಿತರಿದ್ದರು.