ಸೋಮವಾರಪೇಟೆ,ಫೆ.15: ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳಪಡುವ ತಾಲೂಕಿನ ಹಲವು ಕಳಪೆ ರಸ್ತೆ ಕಾಮಗಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಾಹಿತಿ ಹಕ್ಕು ಕಾರ್ಯಕರ್ತರ ತಂಡ ಇಲ್ಲಿನ ಲೋಕೋಪಯೋಗಿ ಇಲಾಖಾ ಅಭಿಯಂತರರ ಕಚೇರಿ ಎದುರು ನಡೆಸುತ್ತಿದ್ದ ಆಹೋರಾತ್ರಿ ಧರಣಿ ಇಂದು ಮಧ್ಯಾಹ್ನ ಅಂತ್ಯಗೊಂಡಿದೆ.

ನಿನ್ನೆ ಮಧ್ಯಾಹ್ನದಿಂದ ಪ್ರಾರಂಭಿಸಲಾಗಿದ್ದ ಧರಣಿ ರಾತ್ರಿಯವರೆಗೂ ಮುಂದುವರೆದಿದ್ದು, ಸುಮಾರು 20ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಕಚೇರಿಯ ಆವರಣದಲ್ಲೇ ರಾತ್ರಿ ಕಳೆದರು. ಇಂದು ಬೆಳಗ್ಗೆಯೂ ಧರಣಿ ಮುಂದುವರೆಸಿದ ಪ್ರತಿಭಟನಾಕಾರರೊಂದಿಗೆ ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯರಾದ ತಂಗಮ್ಮ, ಗಣೇಶ್, ಸಬಿತಾ ಚನ್ನಕೇಶವ ಅವರುಗಳು ಮಾತುಕತೆ ನಡೆಸಿದರು.

ಮಧ್ಯಾಹ್ನದ ವೇಳೆಗೆ ಜನಪ್ರತಿನಿಧಿಗಳು, ಪ್ರತಿಭಟನಾಕಾರರು ಮತ್ತು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್, ಗುತ್ತಿಗೆದಾರ ರಮೇಶ್ ಕೊತಾರಿ ಅವರುಗಳೊಂದಿಗೆ ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಮುಂದಿನ 15 ದಿನಗಳ ಒಳಗೆ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಅಭಿಯಂತರ ಮಹೇಂದ್ರಕುಮಾರ್ ಅವರಿಂದ ಲಿಖಿತ ಭರವಸೆ ಪಡೆದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಗ್ಗನ ಅನಿಲ್‍ಕುಮಾರ್ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಬಗ್ಗನ ಹರೀಶ್, ರಾಶಿತ್, ಕಾಟ್ನಮನೆ ವಿಠಲ್, ಶಾಂತಳ್ಳಿ ಗ್ರಾ.ಪಂ. ಸದಸ್ಯ ತ್ರಿಶೂಲ್, ಐಗೂರು ಗ್ರಾ.ಪಂ. ಅಧ್ಯಕ್ಷ ಚಂಗಪ್ಪ, ಮಾಹಿತಿ ಹಕ್ಕು ಕಾರ್ಯಕರ್ತರಾದ ಹರಗ ಡಾಲಿ ಪ್ರಕಾಶ್, ಕಾರ್ತಿಕ್, ಅಭಿನಂದನ್, ಸಂದೀಪ್, ಆರ್. ನಿಶ್ವಿತ್, ವಿಜಯಕುಮಾರ್, ಅಶ್ವಿನ್, ರವಿ ಪ್ರತಾಪ್, ಕಂಬಳ್ಳಿ ವಿಜಯ್, ಸುಮೇಧ ರಾಘವ, ಕಿರಗಂದೂರು ಗ್ರಾಮದ ಚಿದಾನಂದ, ತಲ್ತಾರೆಶೆಟ್ಟಳ್ಳಿ ಸುರೇಂದ್ರ, ದಿನೇಶ್ ಸೇರಿದಂತೆ ಇತರರು ಕೈಜೋಡಿಸಿದ್ದರು.

ಕೂಡಿಗೆಯಲ್ಲಿರುವ ಹಳೆ ಸೇತುವೆಗೆ ಬಣ್ಣ ಬಳಿಯಲೆಂದು ರೂ. 8ಲಕ್ಷ ಬಿಲ್ ಮಾಡಿದ್ದಾರೆ. ಕಳಪೆ ಗುಣಮಟ್ಟದ 20 ಲೀಟರ್ ಬಣ್ಣ ಬಳಿದಿದ್ದಾರೆ. ಕೆಲ ಇಂಜಿನಿಯರ್‍ಗಳೇ ಬೇನಾಮಿ ಹೆಸರಿನಲ್ಲಿ ಗುತ್ತಿಗೆ ನಿರ್ವಹಿಸುತ್ತಿದ್ದಾರೆ. ಹೀಗಾದರೆ ಗುಣಮಟ್ಟ ಕಾಯ್ದುಕೊಳ್ಳುವದು ಹೇಗೆ? ಎಂದು ರಾಶಿತ್ ಪ್ರಶ್ನಿಸಿದರು.

ಕೂಡಿಗೆ-ಕೋವರ್‍ಕೊಲ್ಲಿ ರಸ್ತೆ ಕಳಪೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಇಂಜಿನಿಯರ್ ರಘು ಅವರು ತನ್ನ ಮೇಲೆಯೇ ಪೊಲೀಸ್ ದೂರು ನೀಡಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಮಿಷನ್ ಆಸೆಗೆ ಬಲಿಬಿದ್ದು, ಸರ್ಕಾರದ ಹಣವನ್ನು ಕಳಪೆ ಕಾಮಗಾರಿ ಮೂಲಕ ಕೊಳ್ಳೆಹೊಡೆಯುವದನ್ನು ಪ್ರಶ್ನಿಸಿದರೆ ತಪ್ಪೇ? ಎಂದು ರಾಶಿತ್ ಆಕ್ರೋಶಿತರಾಗಿ ಪ್ರಶ್ನಿಸಿದರು.

ಕೂಡಿಗೆ-ಕೋವರ್‍ಕೊಲ್ಲಿ ರಸ್ತೆ ಇಂದಿಗೂ ಪೂರ್ಣಗೊಂಡಿಲ್ಲ. ಕಲ್ವರ್ಟ್ ಕಾಮಗಾರಿ, ಚರಂಡಿ, ಡಾಂಬರು, ಮರ ಮತ್ತು ವಿದ್ಯುತ್ ಕಂಬಗಳ ಸ್ಥಳಾಂತರ ಆಗದೇ ಇದ್ದರೂ ಗುತ್ತಿಗೆದಾರರಿಗೆ ಈಗಾಗಲೇ 8 ಕೋಟಿ ಬಿಲ್ ಮಾಡಲಾಗಿದೆ. ರಸ್ತೆ ಕಾಮಗಾರಿ ಕಳಪೆಯಾಗಿರುವ ಬಗ್ಗೆ ದೂರು ನೀಡಿದ್ದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಗ್ಗನ ಅನಿಲ್ ಅಸಮಾಧಾನ ವ್ಯಕ್ತಪಡಿಸಿದರು.

ಆಲೇಕಟ್ಟೆ ರಸ್ತೆಯ ತಡೆಗೋಡೆ ಕಾಮಗಾರಿ ಕಳಪೆಯಾಗಿ ಕುಸಿದು ಬಿದ್ದು ಮೂರು ವರ್ಷ ಕಳೆದರೂ ಇಂದಿಗೂ ಕಾಮಗಾರಿ ಕೈಗೊಂಡಿಲ್ಲ. ರೂ. 18.88 ಕೋಟಿ ವೆಚ್ಚದ ಕೂಡಿಗೆ-ಕೋವರ್‍ಕೊಲ್ಲಿ ರಸ್ತೆ ಕಳಪೆಯಾಗಿದೆ. ಇಲಾಖೆಯ ಕಚೇರಿ ಬಳಿಯಲ್ಲಿರುವ ಗುಣಮಟ್ಟ ಪರಿಶೀಲನಾ ಘಟಕ ಮುಚ್ಚಲ್ಪಟ್ಟಿದೆ. ಈ ಎಲ್ಲಾ ಅಕ್ರಮಗಳಲ್ಲಿ ಸ್ಥಳೀಯ ಇಂಜಿನಿಯರ್‍ಗಳು ಶಾಮೀಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‍ಇಪಿ ಟಿಎಸ್‍ಪಿ ಯೋಜನೆಯಡಿ ರೂ. 395.31 ಲಕ್ಷ ವೆಚ್ಚದಲ್ಲಿ 43 ಕಾಮಗಾರಿಗಳೂ ಕಳಪೆಯಾಗಿವೆ. ರಾಜ್ಯಹೆದ್ದಾರಿ ವಾರ್ಷಿಕ ನಿರ್ವಹಣೆಯಲ್ಲಿ ಹಣ ದುರುಪಯೋಗವಾಗಿದೆ ಎಂದು ಬಗ್ಗನ ಅನಿಲ್ ಆರೋಪಿಸಿದರು. ಕೂಡಿಗೆ, ಯಡವನಾಡು, ಕಾರೇಕೊಪ್ಪ, ಕೊವರ್‍ಕೊಲ್ಲಿ ರಸ್ತೆ ಕಾಮಗಾರಿಯ ಉಳಿಕೆ ಭಾಗವನ್ನು ಮಾ.10 ಒಳಗೆ ಪೂರ್ಣಗೊಳಿಸುತ್ತೇನೆಂದು ಗುತ್ತಿಗೆದಾರ ರಮೇಶ ಕೊಥಾರಿ ಹೇಳಿದರು. ರಸ್ತೆಯ ಕಾಮಗಾರಿಯ ವಿಳಂಬ ಹಾಗೂ ಕಳಪೆಯ ಬಗ್ಗೆ ರಮೇಶ್ ಅವರನ್ನು ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು.

ಮಾದಾಪುರ, ಸೂರ್ಲಬ್ಬಿ, ಶಾಂತಳ್ಳಿ ರಸ್ತೆಯ ಡಾಮರೀಕರಣ ಕೆಲಸವನ್ನು ಗುತ್ತಿಗೆದಾರರು ಟೆಂಡರ್ ನಿಯಮಾನುಸಾರ ಕೆಲಸ ನಿರ್ವಹಿಸದ ಹಿನ್ನೆಲೆ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದರೆ ಕಾಮಗಾರಿ ಮುಂದುವರಿಸಿದ್ದಾರೆ. ಅವರ ವಿರುದ್ಧ ಇಲಾಖಾ ವತಿಯಿಂದ ಪೊಲೀಸರಿಗೆ ದೂರು ನೀಡಲಾಗುವದು ಎಂದು ಎಇಇ ಮಹೇಂದ್ರ ಕುಮಾರ್ ಹೇಳಿದರು.

ಪಟ್ಟಣಕ್ಕೆ ಸಮೀಪದ ಜಾಲ್ಸೂರು ರಸ್ತೆಯ ಆಲೇಕಟ್ಟೆ ಸಮೀಪದ ನಿರ್ಮಿಸಿರುವ 21.65ಲಕ್ಷ ರೂ. ವೆಚ್ಚದ ತಡೆಗೋಡೆ ಕುಸಿದಿದ್ದು, ಈಗಾಗಲೆ 14.62ಲಕ್ಷ ರೂ.ಗಳನ್ನು ಪಾವತಿಸಿದ್ದು, ಉಳಿದ 5.47 ಲಕ್ಷ ರೂ. ಹಣವನ್ನು ಗುತ್ತಿಗೆದಾರ ತಡೆಗೋಡೆ ನಿರ್ಮಿಸಿ, ಸಂಬಂಧಪಟ್ಟ ಪ್ರಾಧಿಕಾರದಿಂದ ಗುಣಮಟ್ಟವನ್ನು ಪರಿಶೀಲಿಸಿದ ನಂತರ ಪಾವತಿ ಮಾಡಲಾಗುವದು ಹಾಗೂ ಪ್ರತಿಭಟನಾಕಾರರು ಆರೋಪಿಸಿರುವ ಎಲ್ಲಾ ಕಾಮಗಾರಿಗಳನ್ನು ಪರಿಶೀಲಿಸಿ, ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವದು ಎಂದು ಎಇಇ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

15 ದಿನಗಳ ನಂತರ ಆಗಮಿಸಿ ಎಲ್ಲಾ ಕಾಮಗಾರಿಗಳನ್ನು ಪರಿಶೀಲಿಸಲಾಗುವದು ಎಂದು ಇಲಾಖೆಯ ಮುಖ್ಯ ಇಂಜಿನಿಯರ್ ದೂರವಾಣಿಯ ಮೂಲಕ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ತಾತ್ಕಲಿಕವಾಗಿ ಧರಣಿ ಹಿಂಪಡೆಯಲಾಗಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅನಿಲ್ ಕುಮಾರ್ ಹೇಳಿದರು.