ಮಡಿಕೇರಿ, ಫೆ. 15: ಕೃಷಿ ಎಂದರೆ ಶ್ರಮ. ಶ್ರಮದೊಂದಿಗೆ ಆಸಕ್ತಿ ಇದ್ದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕೃಷಿ ಹಾಗೂ ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಟಿ.ಎಚ್. ಗೌಡ ಅಭಿಪ್ರಾಯಪಟ್ಟರು.
ಆಕಾಶವಾಣಿ ಮಡಿಕೇರಿ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಶಿವಮೊಗ್ಗ ವಿಸ್ತರಣಾ ಘಟಕದ ಸಹಯೋಗದಲ್ಲಿ ನಗರದ ವಿಸ್ತರಣಾ ಶಿಕ್ಷಣ ಘಟಕ ತರಬೇತಿ ಕೇಂದ್ರದಲ್ಲಿ ನಡೆದ ಬಾನುಲಿ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವು ಬಾರಿ ರೈತರಲ್ಲಿ ಆಸಕ್ತಿ ಕುಂದುವದರಿಂದ ಕೃಷಿಯಲ್ಲಿ ನಷ್ಟ ಉಂಟಾಗುತ್ತದೆ. ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡು ಅದನ್ನು ಅನುಷ್ಠಾನ ಮಾಡುವದರ ಜೊತೆಗೆ ರೈತರಲ್ಲಿ ಆಸಕ್ತಿ ಕೂಡ ಇರಬೇಕಾಗುತ್ತದೆ. ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ರೈತ ಅಭಿವೃದ್ಧಿ ಹೊಂದಿದರೆ ದೇಶವೇ ಅಭಿವೃದ್ಧಿ ಹೊಂದಿದಂತೆ ಎಂದರು.
ದೇಶಾದ್ಯಂತ ಹರಡಿರುವ ದೊಡ್ಡ ಜಾಲ ಬಾನುಲಿ. ಕೃಷಿ ಬೆಳವಣಿಗೆಯ ಹಂತದಲ್ಲಿದ್ದಾಗ ರೇಡಿಯೋ ಅದರ ಅಭಿವೃದ್ಧಿಯಲ್ಲಿ ಸಾಕಷ್ಟು ಶ್ರಮ ವಹಿಸಿದೆ. ಜನರು ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುವದರ ಜೊತೆಗೆ ಬಾನುಲಿಯಿಂದ ಸುಲಭವಾಗಿ ಮಾಹಿತಿ ಪಡೆದುಕೊಳ್ಳಬಹುದು. ರೇಡಿಯೋ ಒಂದು ಉತ್ತಮ ಮಾಧ್ಯಮವಾಗಿದೆ ಎಂದರು.
ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಮುಂಡಂಡ ಸಿ.ನಾಣಯ್ಯ ಮಾತನಾಡಿ, 2022ರ ಒಳಗಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸುವ 7 ಅಂಶಗಳ ಕಾರ್ಯಕ್ರಮವನ್ನು ಪರಿಚಯಿಸಿ ಅದನ್ನು ಅನುಷ್ಠಾನ ಗೊಳಿಸಲು ಉತ್ತೇಜನ ನೀಡಲಾಗು ವದು. ರೈತರಿಗೆ ಅನುಕೂಲವಾಗುವಂತೆ ಹಲವಾರು ವಿಶೇಷವಾದÀ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದೇವೆ. ಆದರೆ ಇಂದಿನ ರೈತ ದಿನಾಚರಣೆಯಲ್ಲಿ ರೈತರು ಪಾಲ್ಗೊಳ್ಳದೆ ನಮಗೆ ಅವಮಾನ ಮಾಡಿರುವದು ಅತ್ಯಂತ ಬೇಸರದ ಸಂಗತಿ ಎಂದರು.
1960ರಲ್ಲಿ ನಮ್ಮ ದೇಶವು ಕೃಷಿ ಉತ್ಪನ್ನಗಳಲ್ಲಿ ಕೊರತೆ ಕಂಡಿತ್ತು. ತದನಂತರ ಹಸಿರು ಕ್ರಾಂತಿಯೊಂದಿಗೆ ಕೃಷಿ ಕ್ಷೇತ್ರವನ್ನು ವೃದ್ಧಿ ಮಾಡಿಕೊಂಡು 2015ರಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಇಂದು ಶೇ. 3.7ರಷ್ಟು ಕೃಷಿ ಉತ್ಪನ್ನಗಳಲ್ಲಿ ಅಭಿವೃದ್ಧಿ ಕಂಡು ಬಂದಿದ್ದು, ದೇಶವು ಕೃಷಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಆದರೆ ಇದರಿಂದ ರೈತರಿಗೆ ಅನುಕೂಲ ವಾಗಿದೆಯೋ ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಿದೆ. ರೈತರು ತುಂಬಾ ಕಷ್ಟ ಅನುಭವಿಸುತ್ತಿದ್ದು, ಆದಾಯದಲ್ಲಿ ಬಹಳ ವ್ಯತ್ಯಾಸ ಕಂಡುಬರುತ್ತಿದೆ. ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ರೈತರ ಆದಾಯ ಕಡಿಮೆ ಇದೆ. ಶೇ.5ರಲ್ಲಿ 1 ರಷ್ಟು ರೈತರು ಇನ್ನೂ ಕೂಡ ಬಡತನದಲ್ಲೇ ಜೀವಿಸುತ್ತಿದ್ದು, ಪ್ರಧಾನ ಮಂತ್ರಿಗಳು ಕೃಷಿ ಚಟುವಟಿಕೆಗಳಿಗೆ ಉತ್ತಮ ಆದಾಯ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭ 2022ರ ಹೊತ್ತಿಗೆ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ವಿಧಾನಗಳ ಬಗ್ಗೆ ವಿಚಾರ ಸಂಕಿರಣ ನಡೆಯಿತು.
ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮುಖ್ಯಸ್ಥರಾದ ಡಾ. ಐ.ಎನ್. ದೊರೆಯಪ್ಪ ಗೌಡ, ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ. ರಘುಪತಿ ಎನ್. ಕೆಂಚಾರೆಡ್ಡಿ, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಷಯತಜ್ಞರಾದ ಡಾ. ಕೆ.ವಿ. ವೀರೇಂದ್ರ ಕುಮಾರ್, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಯುವ ವಿಜ್ಞಾನಿ ಡಾ. ಮಂಡೇಪಂಡ ಕಾವೇರಿ ದೇವಯ್ಯ, ರಾಷ್ಟ್ರ ಮಟ್ಟದ ಕೃಷಿ ಪ್ರಶಸ್ತಿ ಪುರಸ್ಕøತರಾದ ಮಂದ್ರೀರ ತೇಜಸ್ ನಾಣಯ್ಯ, ಸೋಮೆಂಗಡ ಸಿ. ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.