ವೀರಾಜಪೇಟೆ, ಫೆ. 15 : ಹೆಣ್ಣು ಮಕ್ಕಳಿಗೆ ಇಂದು ಆಸ್ತಿ ಹಕ್ಕು ನೀಡುವ ಸುತ್ತೋಲೆ ಹೊರಬಂದಿದೆ, ಇದು ಹೆಣ್ಣು ಮಕ್ಕಳಿಗೆ ಮಹತ್ವದ ವಿಚಾರ ನಿಜ. ಆದರೆ ಇದರ ಬಗ್ಗೆ ಚಿಂತಿಸಬೇಕಾಗುತ್ತದೆ ಏಕೆಂದರೆ ಹಕ್ಕಿನ ವಿಚಾರದ ಜೊತೆಗೆ ಬಾಂಧವ್ಯದ ಪ್ರಶ್ನೆಯು ಮಹತ್ವವನ್ನು ಹೊಂದಿದೆ.. ಇದರಿಂದಾಗಿ ಕುಟುಂಬದ ಸಾಮಾರಸ್ಯಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತೆಯಂಡ ವೀಣಾ ಅಚ್ಚಯ್ಯ ಹೇಳಿದರು.

ಬಾಳುಗೋಡು ಕೊಡವ ಸಮಾಜ ಒಕ್ಕೂಟದ ಸಭಾಂಗಣದಲ್ಲಿ ಮಡಿಕೇರಿ ಕೊಡವ ಮಕ್ಕಡ ಕೂಟದ 5ನೇ ವರ್ಷಚಾರಣೆ ಮತ್ತು ಕೊಡವ ಸಮಾಜ ಒಕ್ಕೂಟದ ಮಹಿಳಾ ಸಂಘದ ಸಹಯೋಗದಲ್ಲಿ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಬರೆದ ನಂಗಡ ಪದ್ಧತಿ ಕುಂಞ ಪುಟ್ಟ್‍ನಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಹಿರಿಯರ ಕಾಲದ ಆಚಾರ ವಿಚಾರ, ಸಂಸ್ಕøತಿ ಇಂದು ಬದಲಾಗಿದೆ ಆದರೆ ಕೆಲವು ಪುಸ್ತಕದಲ್ಲಿರುವ ಪದ್ದತಿ ,ಆಚಾರ ವಿಚಾರಗಳನ್ನು ಓದಿ ಅರಿತುಕೊಂಡು ಇಂದಿನವರು ಅದನ್ನು ಉಳಿಸಿಕೊಳ್ಳಬೇಕು. ಪೊಮ್ಮಕ್ಕಡ ಒಕ್ಕೂಟ ಉತ್ತಮವಾಗಿ ಬೆಳೆದು ಬರಬೇಕು ಆ ಮೂಲಕ ಮಹಿಳೆಯರ ಸಮಸ್ಯೆ, ಅಬಿವೃದ್ದಿಯ ಬಗ್ಗೆ ಕಾಳಜಿ ವಹಿಸಬೇಕು.ಜೊತೆಗೆ ನಮ್ಮ ಸಾಮಾಜಿಕ ಸಮಸ್ಯೆಗಳ ವಿರುದ್ದ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ ಮಾತನಾಡಿ, ಗಂಡಸರು ಸಮಾಜಗಳನ್ನು ಸ್ಥಾಪಿಸಿ ಅಲ್ಲಿ ಮಹಿಳೆಗೆ ನಾಮಾಕವಸ್ಥೆಯ ಸ್ಥಾನ ನೀಡುತ್ತಿದ್ದರು. ಆದ್ದರಿಂದ ನಮ್ಮ ಒಕ್ಕೂಟ ಅವರಿಗೆ ಒಂದು ಮಹಿಳಾ ಕೂಟ ರಚಿಸಲು ಅವಕಾಶÀ ನೀಡಿ ಅವರ ಕಾರ್ಯ ಚಟುವಟಿಕೆಗೆ ಉತ್ತಮ ಅವಕಾಶ ನೀಡಿದೆ. ಆದ್ದರಿಂದ ಮುಂದೆ ಎಲ್ಲಾ ಕೊಡವ ಸಮಾಜದ ಮಹಿಳಾ ಘಟಕಗಳು ಒಕ್ಕೂಟದೊಂದಿಗೆ ಕೈ ಜೋಡಿಸಿ ಸಂಘಟನೆಯನ್ನು ಬಲ ಪಡಿಸಬೇಕು. ಹೆಣ್ಣು ಮಕ್ಕಳ ಆಸ್ತಿ ಹಕ್ಕು ಸಮಂಜಸವಾದರೂ ಕೌಟುಂಬಿಕ ಸಾಮರಸ್ಯದ ಹಿನ್ನಲೆಯಲ್ಲಿ ಕಲಹಕ್ಕೆ, ವ್ಯಾಜ್ಯಗಳಿಗೆ ಅವಕಾಶ ನೀಡಬಾರದು. ಎಂದಿನಂತೆ ತಮ್ಮ ತಮ್ಮ ಬಾಂಧವ್ಯವನ್ನು ಉಳಿಸಿಕೊಂಡು ಹೋಗುವದು ಸೂಕ್ತ. ಕೊಡವರು ಹೆಣ್ಣು ಮಕ್ಕಳಿಗೆ ಉತ್ತಮ ಸ್ಥಾನಮಾನ ನೀಡಿ ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ ಎಂದರು.

ಸಭೆಯನ್ನು ಉದ್ದೇಶಿಸಿ ಕೊಡವ ಸಮಾಜ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ , ಜಿ. ಪಂ. ಮಾಜಿ ಸದಸ್ಯೆ ಕಾಂತಿ ಸತೀಶ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಚೆರಿಯಪಂಡ ಇಮ್ಮಿ ಉತ್ತಪ್ಪ ವಹಿÀಸಿ ಮಾತನಾಡಿದರು. ಕೊಡವ ಮಕ್ಕಡ ಒಕ್ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ , ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಒಕ್ಕೂಟದ ಖಜಾಂಚಿ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ , ಜಂಟಿ ಕಾರ್ಯದರ್ಶಿ ಅನಿತಾ, ಮಾಜಿ ಜಿ. ಪಂ. ಸದಸ್ಯೆ ಶರೀನ್ ಸುಬ್ಬಯ್ಯ, ಸಾಹಿತಿ ರಮೇಶ್ ಉತ್ತಪ್ಪ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಸಾಹಿತಿ ರಮೇಶ್ ಉತ್ತಪ್ಪ ಅವರ 1965 ರ ಯುದ್ದ ಹಾಗೂ ಕೊಡಗಿನ ಮಹಾವೀರ ಎಂಬ ಪುಸ್ತಕದ ಎರಡನೇ ಅವೃತ್ತಿ ಹಾಗೂ ಬೊಳ್ಳಜಿರ ಅಯ್ಯಪ್ಪ ಅವರ ಆಟ್ ಪಾಟ್ ಪಡಿಪ್ ಎಂಬ ಸಂಗ್ರಹ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.