ಶ್ರೀಮಂಗಲ, ಫೆ. 15: ಕೊಡಗು ಜಿಲ್ಲೆಗೆ ಮಾರಕವಾಗುವ ಎಲ್ಲಾ ಯೋಜನೆಗಳಿಗೆ ಜಿಲ್ಲಾ ಕಾಂಗ್ರೆಸ್ ವಿರೋಧವಿದೆ. ಕೊಡಗಿನ ಮೂಲಕ ಉದ್ದೇಶಿತ ಹಲವು ರೈಲ್ವೆ ಮಾರ್ಗ ಯೋಜನೆಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಆಪಟ್ಟೀರ ಟಾಟು ಮೊಣ್ಣಪ್ಪ ತಿಳಿಸಿದ್ದಾರೆ.

ಈ ಬಗ್ಗೆ ಲಿಖಿತ ಪತ್ರಿಕಾ ಹೇಳಿಕೆ ನೀಡಿರುವ ಅವರು ಜಿಲ್ಲೆಯ ಆಸ್ಥಿತ್ವಕ್ಕೆ ಧಕ್ಕೆಯಾಗುವ ಮಾರಕ ಯೋಜನೆಗಳಿಗೆ ಹಿಂದಿನಿಂದಲೂ ಕಾಂಗ್ರೆಸ್ ವಿರೋಧಿಸಿದೆ. ಈಗ ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ರೈಲು ಮಾರ್ಗಕ್ಕೆ ವಿರೋಧ ವ್ಯಕ್ತಪಡಿಸಿ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಮ್ ಅವರು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದು ಈ ಯೋಜನೆಯನ್ನು ಯಾವದೇ ಕಾರಣಕ್ಕೂ ಜಾರಿ ಮಾಡದಂತೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಎಂಎಲ್‍ಸಿ ವೀಣಾ ಅಚ್ಚಯ್ಯ ಅವರು ವಿಧಾನ ಪರಿಷತ್‍ನಲ್ಲಿ ಪ್ರಸ್ತಾಪ ಮಾಡಿ, ಯಾವದೇ ಕಾರಣಕ್ಕೂ ಕೊಡಗಿನ ಆಸ್ಥಿತ್ವಕ್ಕೆ ಧಕ್ಕೆ ಬರುವಂತಹ ರೈಲ್ವೆ ಯೋಜನೆ ರೂಪಿಸಬಾರದು. ಈ ಯೋಜನೆಗೆ ತಡೆ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ವಿವರಿಸಿದ್ದಾರೆ.

ಅಖಿಲ ಕೊಡವ ಸಮಾಜ ವಿರೋಧ

ವೀರಾಜಪೇಟೆ: ಕೊಡಗು ಜಿಲ್ಲೆಯ ಮೂಲಕ ಕೇರಳಕ್ಕೆ ಹಾದು ಹೋಗುವ ರ್ಯೆಲ್ವೆ ಯೋಜನೆಯನ್ನು ಅಖಿಲ ಕೊಡವ ಸಮಾಜ ಕೇಂದ್ರ ಸಮಿತಿ ಸಂಪೂರ್ಣ ವಿರೋಧ ವ್ಯಕ್ತ ಪಡಿಸುತ್ತಿದ್ದೇವೆ ಎಂದು ಗೌರವ ಕಾರ್ಯದರ್ಶಿ ಅಮ್ಮಣಿಚಂಡ ರಾಜಾ ನಂಜಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಯೋಜನೆಯಿಂದ ಕೊಡಗಿನ ಜನತೆಗೆ ತೀವ್ರ ನಷ್ಟ ಉಂಟಾಗುವುದಲ್ಲದೆ ನಮ್ಮ ಮೂಲಭೂತವಾದ ವ್ಯವಸಾಯ ಮತ್ತು ಆಸ್ತಿಪಾಸ್ತಿಗಳಿಗೆ ತೀವ್ರ ಧಕ್ಕೆ ಉಂಟಾಗಲಿದೆ ರ್ಯೆಲ್ವೆ ಯೋಜನೆ ವಿರುದ್ಧ ತಾ. 18 ರಂದು ಮೈಸೂರಿನಲ್ಲಿ ಆಯೋಜಿಸಿರುವ ಪ್ರತಿಭಟನಾ ರ್ಯಾಲಿಗೆ ಸಂಫೂರ್ಣ ಬೆಂಬಲ ನೀಡಲಾಗುವದು ಎಂದು ತಿಳಿಸಿದರು.