ಮಡಿಕೇರಿ, ಫೆ. 14: ನಗರಸಭೆಯ ವಿರುದ್ಧ ಬಿಜೆಪಿ ಇತ್ತೀಚೆಗೆ ನಡೆಸಿದ ಪ್ರತಿಭಟನೆ ಒಂದು ನಾಟಕೀಯ ಬೆಳವಣಿಗೆಯಾಗಿದೆ ಎಂದು ಟೀಕಿಸಿರುವ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾóಕ್, ಈ ಪ್ರಹಸನದ ಔಚಿತ್ಯದ ಬಗ್ಗೆ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯ ಸರಕಾರದ ಸಹಕಾರದಿಂದ ನಗರಸಭೆಗೆ ಸಾಕಷ್ಟು ಅನುದಾನ ಲಭ್ಯವಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆಯಾಗಿಲ್ಲ ಮತ್ತು ಕಾಂಗ್ರೆಸ್ ಸದಸ್ಯರು ಉತ್ತಮ ರೀತಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಧರಣಿ ಸತ್ಯಾಗ್ರಹ ಮಾಡಲಾಗುತ್ತಿದ್ದು, ನಗರಸಭೆಯಲ್ಲಿ ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಬಿಜೆಪಿಯವರೇ ಆಗಿದ್ದಾರೆ. ಹೀಗಿದ್ದೂ ಜನಪರ ಕಾಳಜಿ ವಹಿಸಿ ಅಭಿವೃದ್ಧಿ ಕಾರ್ಯಗಳಲ್ಲಿ ಒಗ್ಗಟ್ಟನ್ನು ಪ್ರದರ್ಶಿಸದೆ ಕೇವಲ ಕಾಂಗ್ರೆಸ್‍ನ್ನು ಟೀಕಿಸುವದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹಾಗೂ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಕಾಳಜಿ ತೋರಿ ಸರಕಾರದಿಂದ ಅನುದಾನ ದೊರಕಿಸಿ ಕೊಡುತ್ತಿದ್ದಾರೆ. ಮತ್ತಷ್ಟು ಹಣವನ್ನು ತರಲು ಇವರಿಬ್ಬರು ಕಾರ್ಯೋನ್ಮುಖರಾಗಿದ್ದು, ಇದನ್ನು ಬಿಜೆಪಿ ಮಂದಿ ಸಹಿಸುತ್ತಿಲ್ಲವೆಂದು ಅವರು ಟೀಕಿಸಿದ್ದಾರೆ.

ಬೇಸರದ ಸಂಗತಿ: ನಗರಸಭೆಯ ಇತ್ತೀಚಿನ ಬೆಳವಣಿಗೆಗಳು ಅತ್ಯಂತ ವಿಷಾದನೀಯವಾಗಿದ್ದು, ಕೇವಲ ವೈಯಕ್ತಿಕ ವಿಚಾರ, ಟೀಕೆಗಳಿಗಷ್ಟೆ ಸೀಮಿತವಾಗುತ್ತಿರುವದು ಬೇಸರ ಮೂಡಿಸಿದೆ ಎಂದು ಮೂಡಾ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಎ.ಸಿ. ಚುಮ್ಮಿ ದೇವಯ್ಯ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಇತ್ತೀಚೆಗೆ ಬಿಜೆಪಿ ನಡೆಸಿದ ಧರಣಿ ಸತ್ಯಾಗ್ರಹ ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದ್ದಾರೆ. ನಗರಸಭೆಯ ಆಡಳಿತದಲ್ಲಿ ಸಮನಾಂತರ ಹಕ್ಕನ್ನು ಹೊಂದಿರುವ ಬಿಜೆಪಿ ಉಪಾಧ್ಯಕ್ಷ ಸ್ಥಾನ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದರೂ ಧರಣಿಯನ್ನು ನಡೆಸಿದೆ. ಈ ಬಗ್ಗೆ ನಗರಸಭಾ ಅಧ್ಯಕ್ಷರು ತುರ್ತಾಗಿ ಪತ್ರಿಕಾ ಹೇಳಿಕೆ ನೀಡಿ ವಿವಾದಗಳಿಗೆ ಇತಿಶ್ರೀ ಹಾಡಬೇಕೆಂದು ಚುಮ್ಮಿ ದೇವಯ್ಯ ಒತ್ತಾಯಿಸಿದ್ದಾರೆ.

ಮೌನಕ್ಕೆ ಶರಣಾಗಿರುವ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ನಗರಸಭೆಯ ಆಗುಹೋಗುಗಳ ಬಗ್ಗೆ ಸ್ಪಷ್ಟೀಕರಣ ನೀಡದಿದ್ದಲ್ಲಿ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ಜನರು ಸಂಶಯದಿಂದ ನೋಡುವ ಸಾಧ್ಯತೆಗಳಿದೆ ಎಂದು ಚುಮ್ಮಿ ದೇವಯ್ಯ ಅಭಿಪ್ರಾಯಪಟ್ಟಿದ್ದಾರೆ.