ವೀರಾಜಪೇಟೆ, ಫೆ. 12: ಬಾಳೆಲೆ ಬಳಿಯ ದೇವನೂರು ಗ್ರಾಮದ ಗದ್ದೆಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಅಡ್ಡೆಯ ಮೇಲೆ ಇಂದು ತಾಲೂಕು ತಹಶೀಲ್ದಾರ್ ಆರ್.ಗೋವಿಂದರಾಜ್ ಹಾಗೂ ಕಂದಾಯ ಸಿಬ್ಬಂದಿಗಳು ಹಠಾತ್ ಧಾಳಿ ನಡೆಸಿ ಸುಮಾರು 10 ಲಾರಿ ಲೋಡ್‍ಗಳಷ್ಟು ಮರಳನ್ನು ವಶ ಪಡಿಸಿಕೊಂಡಿದ್ದಾರೆ.

ತಾಲೂಕು ಕಚೇರಿಗೆ ಬಂದ ಖಚಿತ ಸುಳಿವಿನ ಮೇರೆ ಸಿಬ್ಬಂದಿಗಳು ಅಪರಾಹ್ನ ಧಾಳಿ ಮಾಡುವ ಸಂದರ್ಭ ಸ್ಥಳದಲ್ಲಿದ್ದ ಕಾರ್ಮಿಕರು ತಲೆ ಮರೆಸಿಕೊಂಡಿದ್ದರಿಂದ ಈ ಮರಳು ಅಡ್ಡೆ ಯಾರದೆಂಬದು ಇನ್ನು ನಿಗೂಢವಾಗಿದೆ. ವಶಪಡಿಸಿಕೊಂಡ ಮರಳನ್ನು ವೀರಾಜಪೇಟೆ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಳೆದ ಅನೇಕ ತಿಂಗಳುಗಳಿಂದ ಈ ಅಕ್ರಮ ಮರಳು ಅಡ್ಡೆಯಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರೆಂದು ಕಂದಾಯ ಅಧಿಕಾರಿಗಳಿಗೆ ಗ್ರಾಮಸ್ಥರು ದೂರಿದ್ದಾರೆ.