ಸೋಮವಾರಪೇಟೆ,ಫೆ.12: ಇಲ್ಲಿಗೆ ಸಮೀಪದ ಗೌಡಳ್ಳಿ ಗ್ರಾಮದ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ಜಾತ್ರೋತ್ಸವಕ್ಕೆ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ವೆಂಕಟಪ್ಪ ಚಾಲನೆ ನೀಡಿದರು.
ಜಾತ್ರೋತ್ಸವದ ಅಂಗವಾಗಿ ಪಶು ಇಲಾಖೆಯ ವತಿಯಿಂದ ಪಶು ಚಿಕಿತ್ಸಾ ಶಿಬಿರ ನಡೆಯಿತು. ಗೌಡಳ್ಳಿಯ ಪಶು ವೈದ್ಯ ಶ್ರೀದೇವ್ ಅವರು ಜಾನುವಾರುಗಳಿಗೆ ಚಿಕಿತ್ಸೆ ನೀಡಿದರು. ಉತ್ತಮ ರಾಸುಗಳಿಗೆ ದೇವಾಲಯ ಸಮಿತಿ ವತಿಯಿಂದ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಎಚ್.ಆರ್.ಮುತ್ತಣ್ಣ, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂಧರ್, ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಎನ್.ಎಸ್.ಪರಮೇಶ್, ದೇವಾಲಯ ಸಮಿತಿ ಪದಾಧಿಕಾರಿಗಳಾದ ಎಚ್.ಎಸ್.ಕೊಮಾರಿಗೌಡ, ಜಿ.ಎ.ಮಹೇಶ್, ದಿನೇಶ್, ಪ್ರಮುಖರಾದ ಜಿ.ಎ.ಅಣ್ಣಯ್ಯ, ಚಂದ್ರಕಲಾ ಮತ್ತಿತರರು ಇದ್ದರು.
ಸೋಮವಾರ ಸಾರ್ವಜನಿಕರಿಗೆ ಗುಡ್ಡಗಾಡು ಓಟ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮ, ಬಸ್ಸು ಹುಡುಕಾಟ, ಭಕ್ತಿಗೀತೆ, ಜಾನಪದ ಗೀತೆ, ಭಾವಗೀತೆ, ಬೈಕ್ ಮತ್ತು ಸೈಕಲ್ ನಿಧಾನ ಚಾಲನಾ ಸ್ಪರ್ಧೆ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳು ನಡೆದವು.
ತಾ.13ರಂದು(ಇಂದು) ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸ್ಥಳೀಯ ಶ್ರೀ ನವದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿ ವತಿಯಿಂದ ರಾತ್ರಿ 7.30ಕ್ಕೆ ಶಿವಭಕ್ತ ವೀರಮಣಿ ಕಾಳಗ ಮತ್ತು ಭಾರ್ಗವ ವಿಜಯ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಮುತ್ತಣ್ಣ ತಿಳಿಸಿದ್ದಾರೆ.