ಸೋಮವಾರಪೇಟೆ, ಫೆ.10: ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಇಂದು ಸಂಜೆ ಗುಡುಗು ಮಿಂಚಿನೊಂದಿಗೆ ಆಲಿಕಲ್ಲು ಸಹಿತ ವರ್ಷದ ಪ್ರಥಮ ಮಳೆಯ ಸಿಂಚನವಾಯಿತು.

ಸಂಜೆ 5.30ರ ಸುಮಾರಿಗೆ ಭಾರೀ ವರ್ಷಾಧಾರೆಯಾದ ಹಿನ್ನೆಲೆ ಸಾರ್ವಜನಿಕರು ಕೆಲಕಾಲ ತೊಂದರೆ ಎದುರಿಸಿದರು. ಗುಡುಗು ಮಿಂಚಿನ ಸಹಿತ ಆಲಿಕಲ್ಲು ಮಳೆಯಾದ ಹಿನ್ನೆಲೆ 20 ನಿಮಿಷಗಳ ಕಾಲ ವಾಹನ ಸಂಚಾರ ಸ್ತಬ್ಧಗೊಂಡಿತ್ತು. ಮನೆಯಲ್ಲಿದ್ದ ಮಕ್ಕಳು ಆಗಸದಿಂದ ಉದುರಿದ ಆಲಿಕಲ್ಲುಗಳನ್ನು ಹೆಕ್ಕಿದರು. ಒಮ್ಮೆಲೆ ಭಾರೀ ಮಳೆಯಾದ ಹಿನ್ನೆಲೆ ರಸ್ತೆ, ಚರಂಡಿಯಲ್ಲಿ ನಿಲುಗಡೆಗೊಂಡಿದ್ದ ತ್ಯಾಜ್ಯಗಳು ತಗ್ಗುಪ್ರದೇಶಕ್ಕೆ ಹರಿದು ಕೆಲವು ಕಡೆಗಳಲ್ಲಿ ರಸ್ತೆಯ ಮೇಲೆಯೇ ಶೇಖರಣೆಗೊಂಡಿದ್ದವು.

ಗ್ರಾಮೀಣ ಪ್ರದೇಶದ ಬಹುತೇಕ ಚರಂಡಿಗಳು ಮುಚ್ಚಿಹೋಗಿರುವ ಹಿನ್ನೆಲೆ ರಸ್ತೆಯ ಮೇಲೆಯೇ ನೀರು ಹರಿಯಿತು. ಒಟ್ಟಾರೆ ಸೋಮವಾರಪೇಟೆ ಭಾಗಕ್ಕೆ ವರ್ಷಾರಂಭದಲ್ಲಿ ಪ್ರಥಮ ಮಳೆಯ ಸಿಂಚನವಾಗಿದ್ದು, ಸಂಜೆ ಸಮಯ ಮಳೆಗಾಲದ ವಾತಾವರಣವನ್ನು ಕಣ್ಮುಂದೆ ತಂದಿತ್ತು.