ಮಡಿಕೇರಿ, ಫೆ. 10 : ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಮೀಸುತ್ತಿರುವಂತೆಯೇ ಬಿಜೆಪಿಯಿಂದ ಜನಪರ ಶಕ್ತಿ ಪ್ರಣಾಳಿಕೆ ತಯಾರಿಕೆಗೆ ಮಡಿಕೇರಿ ಯಲ್ಲಿ ಮಹತ್ವದ ಸಭೆ ನಡೆದಿದ್ದು, ಬಿಜೆಪಿ ರಾಜ್ಯ ಚುನಾವಣಾ ಪ್ರಣಾಳಿಕೆ ಉಸ್ತುವಾರಿಗಳು ಆಗಮಿಸಿ ಜಿಲ್ಲೆಗೆ ಸಂಬಂಧಿಸಿದಂತೆ ಹಲವು ಅಭಿವೃದ್ಧಿ ಕುರಿತ ಸಲಹೆಗಳನ್ನು ಪಡೆದಿದ್ದಾರೆನ್ನಲಾಗಿದೆ.
ಜಿಲ್ಲೆಯ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ, ಕಾಫಿ, ಕರಿಮೆಣಸು, ಕಿತ್ತಳೆ, ಭತ್ತದ ಬೆಳೆಗಳಿಗೆ ಬೆಂಬಲ ಬೆಲೆ, ಜಮ್ಮಾ ಬಾಣೆ ಸಮಸ್ಯೆ ಇತ್ಯರ್ಥ, ಗ್ರಾಮೀಣ ಭಾಗಗಳಲ್ಲಿ ಸಮರ್ಪಕವಾಗಿ ನೀರು ರಸ್ತೆ ಅಭಿವೃದ್ಧಿ, ದೀನ್ದಯಾಳ್ ಉಪಾಧ್ಯಾಯ ವಿದ್ಯುತ್ ಯೋಜನೆ ಪರಿಮಕಾರಿ ಅನುಷ್ಠಾನ, ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ತಲಕಾವೇರಿ, ಭಾಗಮಂಡಲ, ಇಗ್ಗುತ್ತಪ್ಪ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಾಲಯಗಳನ್ನು ಧಾರ್ಮಿಕ ಕ್ಷೇತ್ರವಾಗಿ ಉಳಿಸುವದು, ಜಿಲ್ಲೆಯಲ್ಲಿ ನಕ್ಸಲರ ಹಾವಳಿ ತಡೆಗಟ್ಟಲು ಗಡಿಭಾಗದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ನಡಿ ಅನುದಾನ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಲವು ಸಲಹೆಗಳನ್ನು ಕ್ರೋಢೀಕರಣ ಮಾಡಲಾಗಿದ್ದು, ಕೇಂದ್ರ ಮತ್ತು ರಾಜ್ಯ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿ ಅನುಷ್ಠಾನ ಮಾಡುವದಕ್ಕೆ ಕ್ರಮಕೈಗೊಳ್ಳುವದಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಕೊಡಗು ಜಿಲ್ಲಾ ಚುನಾವಣಾ ಪ್ರಣಾಳಿಕೆ ಉಸ್ತುವಾರಿ ಬಿ.ಡಿ. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಪ್ರಣಾಳಿಕೆ ಉಸ್ತುವಾರಿಗಳಾದ ಮುರುಳೀಧರ್, ಗಿರಿಧರ್ ಸೇರಿದಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಡಿಕೇರಿ ತಾಲೂಕು ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ನಗರ ಅಧ್ಯಕ್ಷ ಮಹೇಶ್ ಜೈನಿ, ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಅಪ್ಪಣ್ಣ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.