ಸೋಮವಾರಪೇಟೆ, ಫೆ.9 : ಹಳೇ ವೈಷಮ್ಯದ ಹಿನ್ನೆಲೆ ಯುವಕ ನೋರ್ವನ ಮೇಲೆ ಗುಂಪೊಂದು ತೀವ್ರ ಹಲ್ಲೆ ನಡೆಸಿರುವ ಘಟನೆ ಇಂದು ಅಪರಾಹ್ನ ಸಮೀಪದ ಕುಸುಬೂರು ಗ್ರಾಮದಲ್ಲಿ ನಡೆದಿದೆ.
ಪಟ್ಟಣದ ಜನತಾ ಕಾಲೋನಿ ನಿವಾಸಿ ಚನ್ನಗಿರಿ ಎಂಬವರ ಪುತ್ರ ಹರ್ಷಿತ್ ಎಂಬಾತ ಅಪರಾಹ್ನ 2.30ರ ಸುಮಾರಿಗೆ ಕೋವರ್‍ಕೊಲ್ಲಿ ಮಾರ್ಗವಾಗಿ ಸೋಮವಾರಪೇಟೆ ಪಟ್ಟಣಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ಆಗಮಿಸುತ್ತಿದ್ದ ಸಂದರ್ಭ ಹಿಂಬದಿಯಿಂದ ಕಾರೊಂದರಲ್ಲಿ ಆಗಮಿಸಿದ ನಾಲ್ಕೈದು ಮಂದಿಯಿದ್ದ ಗುಂಪು ಕಾರಿನಲ್ಲಿ ಢಿಕ್ಕಿ ಪಡಿಸಿದೆ.
ಪರಿಣಾಮ ಹರ್ಷಿತ್ ರಸ್ತೆಯ ಬದಿಗೆ ಬಿದ್ದಿದ್ದು, ಕಾರಿನಿಂದ ಇಳಿದ ವ್ಯಕ್ತಿಗಳು ಕಬ್ಬಿಣದ ಸಲಾಕೆ ಸೇರಿದಂತೆ ಇನ್ನಿತರ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ತಪ್ಪಿಸಿಕೊಳ್ಳಲು ಹರ್ಷಿತ್ ಪಕ್ಕದ ಕಾಫಿ ತೋಟದೊಳಗೆ ನೆಗೆದಿದ್ದಾನೆ. ಆದರೂ ಬೆನ್ನು ಬಿಡದ ತಂಡ ಹಲ್ಲೆಗೆ ಮುಂದಾಗುತ್ತಿದ್ದಂತೆ ಸ್ಥಳೀಯ ಕಾರ್ಮಿಕರು ‘ಪೊಲೀಸ್ ಪೊಲೀಸ್’ ಎಂದು ಕಿರುಚಿದ್ದಾರೆ.
ಈ ಸಂದರ್ಭ ಯುವಕರ ತಂಡ ಕಾರಿನೊಂದಿಗೆ ಪರಾರಿಯಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಹರ್ಷಿತ್ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಐಗೂರು ಗ್ರಾಮದ ಭರತ್, ಹೇರೂರು ಗ್ರಾಮದ ಅಭಿ, ಹೊಸತೋಟ ಗ್ರಾಮದ ರಾಜೇಶ್ ಸೇರಿದಂತೆ ಇತರರು ತನ್ನ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿರುವದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಇಲ್ಲಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಠಾಣಾಧಿಕಾರಿ ಎಂ. ಶಿವಣ್ಣ ಸೇರಿದಂತೆ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಹರ್ಷಿತ್ ಮತ್ತು ಭರತ್ ತಂಡದ ನಡುವೆ ಈ ಹಿಂದೆಯೂ ಸಾಕಷ್ಟು ಹೊಡೆದಾಟ ಪ್ರಕರಣಗಳು ನಡೆದಿದ್ದು, ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಇಲ್ಲಿನ ಬಾರೊಂದರಲ್ಲಿ ಮಾರಾಮಾರಿ ನಡೆದಿತ್ತು. ಆ ನಂತರ ತಣ್ಣಗಾಗಿದ್ದ ಇವರುಗಳ ನಡುವೆ ಇಂದು ಮತ್ತೊಮ್ಮೆ ಘರ್ಷಣೆ ಸಂಭವಿಸಿದೆ.