ಸೋಮವಾರಪೇಟೆ, ಫೆ. 9: ಯುವ ಜನಾಂಗದಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ ಸಮಾಜಮುಖಿ ವ್ಯಕ್ತಿಗಳನ್ನಾಗಿ ರೂಪಿಸುವ ಕಾರ್ಯವನ್ನು ನಿರ್ವಹಿಸಿಕೊಂಡು ಬರುತ್ತಿರುವ ಜೇಸೀ ಸಂಸ್ಥೆ ವತಿಯಿಂದ ತಾ. 11 ರಂದು ಸೋಮವಾರಪೇಟೆ ಯಲ್ಲಿ ಪರಿಣಾಮಕಾರಿ ಭಾಷಣ ಕಲೆ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಜೇಸೀ ಪುಷ್ಪಗಿರಿ ಹಿಲ್ಸ್ ಅಧ್ಯಕ್ಷ ಕೆ.ಎ. ಪ್ರಕಾಶ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ತಾ. 11 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30 ರವರೆಗೆ ತರಬೇತಿ ಕಾರ್ಯಾಗಾರ ನಡೆಯಲಿದ್ದು, ಜೇಸೀ ಸಂಸ್ಥೆಯ ಅಂತಾರ್ರಾಷ್ಟ್ರೀಯ ತರಬೇತುದಾರರಾದ ಬೆಂಗಳೂರಿನ ನೇಹಾ ಮತ್ತು ತುಮಕೂರಿನ ದರ್ಶನ್ ಅವರುಗಳು ತರಬೇತಿ ನೀಡಲಿದ್ದಾರೆ ಎಂದರು.

ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರಥಮವಾಗಿ ಸಂವಹನ, ಭಾಷಣ ಕಲೆಗಳು ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಆಸಕ್ತ ಯುವಕ-ಯುವತಿಯರು, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಾಶ್ ಮಾಹಿತಿ ನೀಡಿದರು.

ಜೇಸೀ ಸಂಸ್ಥೆಯ ವತಿಯಿಂದ ಹಲವಷ್ಟು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಯುವ ಸಮುದಾಯದಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಪೂರಕವಾಗಿ ಈ ತರಬೇತಿ ಆಯೋಜಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಜೇಸೀ ಸಂಸ್ಥೆಯ ಕಾರ್ಯದರ್ಶಿ ಎಂ.ಎ. ರುಬೀನಾ, ನಿಕಟಪೂರ್ವ ವಲಯಾಧಿಕಾರಿ ಕೆ.ಜೆ. ಗಿರೀಶ್, ನಿರ್ದೇಶಕ ಎಸ್.ಆರ್. ವಸಂತ್, ಸದಸ್ಯ ಪುಷ್ಪಕ್ ಉಪಸ್ಥಿತರಿದ್ದರು.