ಗೋಣಿಕೊಪ್ಪ ವರದಿ, ಫೆ. 9: ಬಿಸಿಯೂಟ ಕಾರ್ಯಕರ್ತರಗಳ ಮುಷ್ಕರದಿಂದಾಗಿ ಅಡುಗೆ ಮಾಡಲು ಮುಂದಾದ ಬಿಳುಗುಂದ ಪ್ರಾಥಮಿಕ ಶಾಲೆಯ ಶಿಕ್ಷಕಿ ಕಾಲು ಸುಟ್ಟು ಕೊಂಡಿರುವ ಘಟನೆ ನಡೆದಿದೆ.ಮಕ್ಕಳ ಹೊಟ್ಟೆ ತಣಿಸಲು ಮುಂದಾದ ಶಿಕ್ಷಕ ವರ್ಗಕ್ಕೆ ಒಂದೇ ದಿನ ಗಾಯದ ಸಮಸ್ಯೆ ಅನುಭವಿಸು ವಂತಾಗಿದೆ. ತಾವೇ ಅಡುಗೆ ಮಾಡಿ ಬಡಿಸುವ ಮೂಲಕ ಜವಾಬ್ದಾರಿ ನಿಭಾಯಿಸುವ ಮೂಲಕ ಶಿಕ್ಷಕರುಗಳು ಪೋಷಕರಿಂದ ಭೇಷ್ ಅನಿಸಿ ಕೊಂಡರೂ ತಾವು ಬವಣೆ ಪಡುವಂತಾಗಿದೆ.ಬಿಸಿಯೂಟ ಕಾರ್ಯಕರ್ತರುಗಳ ಮುಷ್ಕರದಿಂದಾಗಿ ಅಕ್ಷರ ದಾಸೋಹ ಅಧಿಕಾರಿ ಅವರ ಒತ್ತಡಕ್ಕೆ ಮಣಿದು ಶಿಕ್ಷಕರುಗಳು ಅಡುಗೆ ಮಾಡಲು ಮುಂದಾದರು ಎಂಬ ಆರೋಪ ಕೇಳಿ ಬಂದಿದೆ.ಬಿಳುಗುಂದ ಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗಿದ್ದ ಕಾರಣ, ಅಡುಗೆ ಮನೆಯ ಹೊರಗೆ ಬೆಂಕಿ ಹೊತ್ತಿಸಿ ಬಿಸಿ ಬೇಳೆಬಾತ್ ತಯಾರಿ ಮಾಡಲಾಯಿತು. ಐವರು ಶಿಕ್ಷಕರು ಗಳಲ್ಲಿ ಮೂವರು ಶಿಕ್ಷಕರು ಅಡುಗೆಗೆ ಮುಂದಾದರು. ಮುಖ್ಯ ಶಿಕ್ಷಕಿ ರಾಧಾ, ಶಿಕ್ಷಕಿಯರುಗಳಾದ ಹೇಮಾವತಿ, ನೇತ್ರಾವತಿ ಇವರುಗಳು ಅಡುಗೆ ಮಾಡಿದರು. ಅಕ್ಕಿ, ಇದ್ದರೂ ಕೂಡ ಗ್ಯಾಸ್ ಕೊರತೆಯಿಂದಾಗಿ ಬೆಂಕಿ ಎಂಬ ಕಾರಣಕ್ಕೆ ಬಿಸಿ ಬೇಳೆಬಾತ್ ಮಾಡಿದರು. ಶಾಲೆಯಲ್ಲಿ ಸುಮಾರು 55 ವಿದ್ಯಾರ್ಥಿಗಳಿದ್ದು, 45 ಹಾಜರಾತಿ ಇದ್ದವು. ಎಲ್ಲಾ ವಿದ್ಯಾರ್ಥಿಗಳಿಗೂ ಅಡುಗೆ ಮಾಡಿ ಬಡಿಸಲಾಯಿತು. ಹಾಲು ಕಾಯಿಸಿ ಕುಡಿಯಲು ನೀಡಿದ ಕಾರಣ ಉಳಿದಿದ್ದ ಗ್ಯಾಸ್ ಖಾಲಿಯಾಗಿ ಹೊರಗೆ ಕಲ್ಲನ್ನು ಹಾಕಿ ಅಡುಗೆ ಮಾಡುವಂತಾಯಿತು.

ಗ್ಯಾಸ್ ಮುಗಿದ ಕಾರಣ ವಿದ್ಯಾರ್ಥಿಗಳಿಗೆ ಶನಿವಾರದಿಂದ ಬುತ್ತಿ ಅನ್ನ ತರಲು ಶಾಲೆಯಿಂದ ಮನವಿ ಮಾಡಿಕೊಳ್ಳಲಾಗಿದೆ.