ಸೋಮವಾರಪೇಟೆ,ಫೆ.9: ಸಮೀಪದ ಗೌಡಳ್ಳಿ ಗ್ರಾಮದ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ಜಾತ್ರಾ ಮಹೋತ್ಸವ ತಾ. 11 ರಿಂದ 13ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ಕಾರ್ಯದರ್ಶಿ ನಾಗರಾಜು ತಿಳಿಸಿದ್ದಾರೆ.

ತಾ. 11ರಂದು ಬೆಳಿಗ್ಗೆ 10ಕ್ಕೆ ಜಾತ್ರೆಗೆ ಚಾಲನೆ ನೀಡಲಾಗುವದು. ನಂತರ ಪಶು ವೈದ್ಯಕೀಯ ಇಲಾಖೆಯ ಸಹಯೋಗದೊಂದಿಗೆ ಪಶು ಚಿಕಿತ್ಸಾ ಶಿಬಿರ ಹಾಗೂ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ತಾ. 12ರ ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಮುತ್ತಣ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಪ್ಪಚ್ಚು ರಂಜನ್, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ತಾಲೂಕು ಪಂಚಾಯಿತಿ ಸದಸ್ಯೆ ಕುಸುಮಾ ಅಶ್ವಥ್, ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ವೆಂಕಟಪ್ಪ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಡಿ. ದಿವಾಕರ, ವಿಎಸ್‍ಎಸ್‍ಎನ್ ಅಧ್ಯಕ್ಷ ಎಸ್.ಬಿ. ಭರತ್ ಕುಮಾರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಪಿಹೆಚ್‍ಡಿ ಪದವಿ ಪಡೆದಿರುವ ಗೌಡಳ್ಳಿಯ ಡಾ. ಜಿ.ವಿ. ಶುಭ ಅವರನ್ನು ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಲಾಗುವದು.

ತಾ. 13ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸ್ಥಳೀಯ ಶ್ರೀ ನವದುರ್ಗಾ ಪರಮೇಶ್ವರ ಯಕ್ಷಗಾನ ಮಂಡಳಿ ವತಿಯಿಂದ ರಾತ್ರಿ 7.30ಕ್ಕೆ ಶಿವಭಕ್ತ ವೀರಮಣಿ ಕಾಳಗ ಮತ್ತು ಭಾರ್ಗವ ವಿಜಯ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.

ಜಾತ್ರಾ ಮಹೋತ್ಸವ ಪ್ರಯುಕ್ತ ತಾ. 11 ಮತ್ತು 12ರಂದು ಗೌಡಳ್ಳಿ ವಿದ್ಯಾಸಂಸ್ಥೆ ಆವರಣದಲ್ಲಿ ಸಾರ್ವಜನಿಕರಿಗೆ ಮುಕ್ತ ಫುಟ್ಬಾಲ್ ಮತ್ತು ಕೇರಂ ಪಂದ್ಯಾಟ ನಡೆಯಲಿದೆ. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮ, ಬಸ್ಸು ಹುಡುಕಾಟ, ಭಕ್ತಿಗೀತೆ, ಜನಪದ ಗೀತೆ, ಭಾವಗೀತೆ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ನಾಗರಾಜು ತಿಳಿಸಿದ್ದಾರೆ.