ರಾಜ್ಯದಲ್ಲಿ ಚುನಾವಣೆ ಘೋಷಣೆ ಆಗದಿದ್ದರೂ, ಎಲ್ಲೆಡೆ ಚುನಾವಣಾ ಚಟುವಟಿಕೆಗಳು ಬಿರುಸಾಗಿವೆ. ಘೋಷಣೆ ಮಾಡುವದಕ್ಕಿಂತ ಮುಂಚೆ ಚುನಾವಣೆಗಾಗಿ ಮಾಡುವ ಖರ್ಚನ್ನು ಚುನಾವಣಾ ಖರ್ಚು ಎಂದು ಘೋಷಣೆ ಮಾಡಬೇಕಿಲ್ಲ ಎನ್ನುವದೂ ಒಂದು ಕಾರಣ.ಹಾಗಾಗಿಯೇ ಜಿಲ್ಲೆಯಲ್ಲಿ ಭೂಮಿ ಪೂಜೆ-ಇಟ್ಟಿಗೆ ಪೂಜೆ - ಗುದ್ದಲಿ ಪೂಜೆ - ಉದ್ಘಾಟನೆ - ಶಂಕು ಸ್ಥಾಪನೆ ಇನ್ನೂ ಏನೇನೋ ರಭಸದಿಂದ ನಡೆಯುತ್ತಿವೆ.ಮೂರು ಪ್ರಮುಖ ಪಕ್ಷಗಳಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರು ಮಡಿಕೇರಿಗೆ ಬಂದ ಸಂದರ್ಭ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಅಭ್ಯರ್ಥಿಗಳೆಂದು ಅಧಿಕೃತ ಅಲ್ಲದಿದ್ದರೂ, ಇತರ ಆಕಾಂಕ್ಷಿಗಳು ಬಾಯಿ ಬಿಡದ ರೀತಿ ಪರೋಕ್ಷವಾಗಿ ಹೇಳಿದ್ದಾರೆ.
ಜೆಡಿಎಸ್ನ ರಾಜ್ಯಾಧ್ಯಕ್ಷರಾಗಲೀ, ಅಧಿಕೃತ ವಕ್ತರರಾಗಲೀ ಭೇಟಿ ನೀಡದೆ, ಎಲ್ಲೂ ಘೋಷಣೆ ಮಾಡದಿದ್ದರೂ, ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಬಿ.ಎ. ಜೀವಿಜಯ ಹಾಗೂ ಸಂಕೇತ್ ಪೂವಯ್ಯ ಇವರುಗಳು ಅಭ್ಯರ್ಥಿಗಳೆಂದು ಕೆಲಸ ಆರಂಭಿಸಿದ್ದಾರೆ.
ಸಾಲಲ್ಲಿ ನಿಂತಿರುವ ಅಭ್ಯರ್ಥಿಗಳಿಂದಾಗಿ ಕಾಂಗ್ರೆಸ್ಗೆ ಆಯ್ಕೆ ಒಂದು ಸವಾಲಾಗಿದೆ. ಅರ್ಜಿ ಸಲ್ಲಿಕೆ - ಅರ್ಜಿ ಸ್ವೀಕಾರ ಹಂತದಲ್ಲೇ ಇನ್ನೂ ಇದೆ. ಹಾಗಾಗಿ ಆಕಾಂಕ್ಷಿಗಳು ಅತ್ತಿಂದಿತ್ತ ಓಡಾಡುತ್ತಲೇ ಇದ್ದಾರೆ!
ಸದ್ಯಕ್ಕೆ ನಾಲ್ವರ ಹೆಸರುಗಳು ಅಂತಿಮಗೊಂಡಂತಿರುವದರಿಂದ ನಾಲ್ವರನ್ನು ‘ಶಕ್ತಿ’ ಸಂದರ್ಶಿಸಿದೆ. ನಾಳೆಯಿಂದ ಅವರುಗಳ ಅಭಿಪ್ರಾಯಗಳನ್ನು ಓದಿ.
-ಸಂಪಾದಕ