ಚಿತ್ರ ವರದಿ: ವಾಸು
ಸಿದ್ದಾಪುರ, ಫೆ. 8: ಚೆನ್ನಂಗಿ ಗ್ರಾಮದ ಹಾಡಿಗಳ ನಿವಾಸಿಗಳ ಸಮಸ್ಯೆಗೆ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪನವರು ಗ್ರಾಮ ವಾಸ್ತವ್ಯ ಮಾಡಿ ವಿವರ ಪಡೆದುಕೊಂಡರು. ಚೆನ್ನಯ್ಯಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚೆನ್ನಂಗಿ ಗ್ರಾಮದ ದೈಯ್ಯದಹಡ್ಲು ಹಾಡಿಯ ನಿವಾಸಿ ಶಾಂತರಾಮ್ರವರ ನಿವಾಸದಲ್ಲಿ ನಿನ್ನೆ ರಾತ್ರಿ ಕಳೆದರು.
ಚೆನ್ನಂಗಿ ಗ್ರಾಮದ ದೈಯ್ಯದಹಡ್ಲು ಹಾಡಿಯ ನಿವಾಸಿಗಳು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು ಈ ಬಗ್ಗೆ ಇತ್ತೀಚೆಗೆ ‘ಶಕ್ತಿ’ಯು ಸಮಗ್ರ ವರದಿಯನ್ನು ಪ್ರಕಟಿಸಿತ್ತು ಅಲ್ಲದೇ ಈ ಭಾಗದ ಹಾಡಿಯ ನಿವಾಸಿಗಳು ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದರು. ಹಾಡಿಗಳ ನಿವಾಸಿಗಳ ಬವಣೆಯನ್ನು ಅರಿತ ಪದ್ಮಿನಿ ಪೊನ್ನಪ್ಪನವರು ತಾ. 8ರ ರಾತ್ರಿ ದೈಯ್ಯದಹಡ್ಲು ಹಾಡಿಗೆ ವಿವಿಧ ಇಲಾಖಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಮೂಲಭೂತ ಸೌಕರ್ಯಗಳ ಬಗ್ಗೆ ಸಭೆ ನಡೆಸಿ ಚರ್ಚಿಸಿದರು. ಮುಂದಿನ ಮಾರ್ಚ್ 15 ರೊಳಗೆ ವಿದ್ಯುತ್ ಸಂಪರ್ಕದ ಸಮಸ್ಯೆಯನ್ನು ಬಗೆಹರಿಸಿ ಹಾಡಿಗಳ ನಿವಾಸಿಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಲಾಗುವದೆಂದು ಭರವಸೆ ನೀಡಿದರು. ಕುಡಿಯುವ ನೀರಿನ ಸಮಸ್ಯೆ ಇರುವ ಹಿನ್ನೆಲೆಯಲ್ಲಿ 2 ದಿನಗಳಿಗೊಮ್ಮೆ ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ಹಾಡಿಗಳಿಗೆ ನೀರು ಒದಗಿಸಿಕೊಡುವಂತೆ ಪಿ.ಡಿ.ಓ.ರವರಿಗೆ ಆದೇಶ ನೀಡಿದರು. ಅರಣ್ಯ ಇಲಾಖಾಧಿಕಾರಿಗಳು ಹಾಗೂ ಚೆಸ್ಕಾಂ ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯನ್ನು ಮಾಡಿಕೊಂಡು ಹಾಡಿಯ ನಿವಾಸಿಗಳಿಗೆ ಕೂಡಲೇ ಕುಡಿಯುವ ನೀರು ಒದಗಿಸಿಕೊಡಲು ಸಹಕಾರ ನೀಡಬೇಕೆಂದರಲ್ಲದೆ ವಿದ್ಯುತ್ ಸಂಪರ್ಕಕ್ಕೆ ಅಡ್ಡಿಪಡಿಸದೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿ ಹಾಡಿ ನಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸಬೇಕೆಂದರು.
ನಿವಾಸಿಗಳ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ತಾನು ಹಾಡಿ ವಾಸ್ತವ್ಯ ಮಾಡಿರುವದಾಗಿ ತಿಳಿಸಿದರು. ಐ.ಟಿ.ಡಿ.ಪಿ. ಇಲಾಖೆಯ ವತಿಯಿಂದ ಈಗಾಗಲೇ ರಸ್ತೆ ಅಭಿವೃದ್ಧಿಯ ಕ್ರಿಯ ಯೋಜನೆ ತಯಾರಾಗಿದ್ದು ಸಧ್ಯದಲ್ಲೇ ರಸ್ತೆ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು. ಅವಧಿಯೊಳಗೆ ಅಭಿವೃದ್ಧಿ ಕಾರ್ಯಗಳು ನಡೆಯದಿದ್ದಲ್ಲಿ ಹಾಡಿ ನಿವಾಸಿಗಳ ಧರಣಿಗೆ ತಾನು ಬೆಂಬಲ ವ್ಯಕ್ತಪಡಿಸುವದಾಗಿ ತಿಳಿಸಿದರು. ಅರಣ್ಯದಂಚಿನಲ್ಲಿರುವ ನಿವಾಸಿಗಳು ಪ್ರಕೃತಿಯನ್ನು ಕಾಪಾಡಿ ಮುಂದಿನ ಪೀಳಿಗೆಗೆ ಕಾಡು ಉಳಿಸಿ ರಕ್ಷಣೆ ಮಾಡಬೇಕೆಂದು ಕಿವಿಮಾತು ಹೇಳಿದರು.
ಹಾಡಿಯ ನಿವಾಸಿ ಶಾಂತರಾಮ್ ಮಾತನಾಡಿ, ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಇದುವÀರೆಗೂ ಹಾಡಿಗಳಲ್ಲಿ ವಿದ್ಯುತ್ ಸಂಪರ್ಕ, ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ಆದಿವಾಸಿಗಳನ್ನು ಹಾಡಿಗಳ ನಿವಾಸಿಗಳನ್ನು ಚುನಾವಣೆಯ ಸಂದರ್ಭದಲ್ಲಿ ಓಟಿಗಾಗಿ ಬಳಸಿಕೊಳ್ಳುತ್ತಿರುವದಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಹಾಡಿ ನಿವಾಸಿ ಸಿದ್ದಪ್ಪ ಮಾತನಾಡಿ, ಕಳೆದ 1 ವರ್ಷಗಳ ಹಿಂದೆ ಸಮಾಜ ಕಲ್ಯಾಣ ಸಚಿವ ಆಂಜನೇಯರವರು ರೇಷ್ಮೆ ಹಾಡಿಗೆ ಭೇಟಿ ನೀಡಿ ವಾಸ್ತವ್ಯ ಹೂಡಿ ಹಲವಾರು ಭರವಸೆಗಳನ್ನು ನೀಡಿದ್ದರು. ಆದರೆ ಸಮಸ್ಯೆಗಳು ಬಗೆಹರಿದಿಲ್ಲವೆಂದು ದೂರಿದರು. ಕಾಡು ಪ್ರಾಣಿಗಳ ನಡುವೆ ಬದುಕು ಸಾಗಿಸುತ್ತಿರುವ ನಮ್ಮ ಮಕ್ಕಳಿಗೆ ಶಾಲೆ, ಕಾಲೇಜುಗಳಿಗೆ ಸಮರ್ಪಕವಾದ ರಸ್ತೆ ಹಾಗೂ ಬಸ್ಸಿನ ಸೌಕರ್ಯವಿಲ್ಲವೆಂದು ಅಳಲುತೊಡಿಕೊಂಡರು. ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಡಿಯ ನಿವಾಸಿಗಳ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು. ಐ.ಟಿ.ಡಿ.ಪಿ. ಇಲಾಖೆ ಯಿಂದ ಆದಿವಾಸಿಗಳಿಗೆ ಸಿಗುವ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲವೆಂದು ಪಂಚಾಯಿತಿ ವಿರುದ್ದ ಹಾಗೂ ಐ.ಟಿ.ಡಿ.ಪಿ. ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಜಿ.ಪಂ. ಸದಸ್ಯೆ ಲೀಲಾವತಿ, ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್, ಚೆಸ್ಕಾಂ ಅಧಿಕಾರಿ ಮಾದಯ್ಯ, ಐ.ಟಿ.ಡಿ.ಪಿ. ಅಧಿಕಾರಿ ನವೀನ್, ಪಿ.ಡಿ.ಓ. ರಾಜನ್, ವಲಯ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಸೋಮಯ್ಯ, ಮಾಂಗೇರ ಪೊನ್ನಪ್ಪ, ಆದಿವಾಸಿ ಮುಖಂಡ ರಾಮ, ಸಿದ್ದಪ್ಪ, ಶಾಂತರಾಮ್, ಹಾಗೂ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದು ವಿವಿಧ ಸಲಹೆಗಳನ್ನು ನೀಡಿದರು. ಸಿದ್ದಪ್ಪ ಸ್ವಾಗತಿಸಿ ವಂದಿಸಿದರು. ನಂತರ ಮಧ್ಯರಾತ್ರಿ 2 ಗಂಟೆಯವರೆಗೆ ಹಾಡಿಯ ನಿವಾಸಿಗಳೊಂದಿಗೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿದರಲ್ಲದೆ ದಾಖಲಾತಿಗಳನ್ನು ಪರಿಶೀಲಿಸಿದರು. ಹಾಡಿಯವರೊಂದಿಗೆ ಭೋಜನ ಸೇವಿಸಿದ ಪದ್ಮಿನಿ ಮನೆಯ ನೆಲದಲ್ಲಿ ಚಾಪೆಯಲ್ಲಿ ನಿದ್ರಿಸಿದರು.