ಸೋಮವಾರಪೇಟೆ, ಫೆ.8 : ಪ್ರಸಕ್ತ ಸಾಲಿನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯ ಕರ್ತರು ಕೈಗೊಳ್ಳಬೇಕಾದ ತಯಾರಿಗಳ ಬಗ್ಗೆ ಎಐಸಿಸಿ ಕಾರ್ಯದರ್ಶಿ ಹಾಗೂ ಪಕ್ಷದ ಕೊಡಗು ಜಿಲ್ಲಾ ಉಸ್ತುವಾರಿ ವಿಷ್ಣುನಾಥನ್ ಪಾಠ ಮಾಡಿದರು.

ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಬೂತ್ ಅಧ್ಯಕ್ಷರು, ಬೂತ್ ಏಜೆಂಟ್‍ಗಳಿಗೆ ಆಯೋಜಿಸಲಾಗಿದ್ದ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯವರು ಕಾಂಗ್ರೆಸ್ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಸುವ ಪ್ರಯತ್ನ ನಡೆಸುತ್ತಾರೆ. ಒಂದೇ ಮನೆಯಲ್ಲಿ ಅಲ್ಪಸಂಖ್ಯಾತರ 8 ರಿಂದ 10 ಮತಗಳಿದ್ದರೆ, ಹಲವಷ್ಟು ಮತದಾರರ ಹೆಸರನ್ನು ಕೈಬಿಡುವಂತೆ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ವ್ಯವಹರಿಸುತ್ತಾರೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಬೂತ್ ಸಮಿತಿ ಪದಾಧಿಕಾರಿ ಗಳು ಜಾಗ್ರತೆ ವಹಿಸಬೇಕು ಎಂದರು.

ಪ್ರತಿ ಬೂತ್‍ನಲ್ಲೂ ಮತದಾರರ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ‘ಒಂದು ಕುಟುಂಬಕ್ಕೆ ಒಂದು ಪುಟ’ ಎಂಬ ಯೋಜನೆಯಂತೆ ಕುಟುಂಬದಲ್ಲಿರುವ ಮತದಾರರ ಹೆಸರನ್ನು ನಮೂದಿಸ ಬೇಕು. ಆ ಕುಟುಂಬ ಯಾವ ಪಕ್ಷದ ಮತದಾರರು ಎಂಬದನ್ನು ಗುರುತಿಸಬೇಕು. ಯಾವದೇ ಪಕ್ಷಕ್ಕೂ ಬೆಂಬಲಿಸದ ಕುಟುಂಬಗಳ ಪಟ್ಟಿ ಮಾಡಿ ಕೆಪಿಸಿಸಿಗೆ ಕಳುಹಿಸಿಕೊಡಬೇಕು ಎಂದು ವಿಷ್ಣುನಾಥನ್ ಅವರು ಚುನಾವಣಾ ತಂತ್ರಗಾರಿಕೆಯ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿಕೊಟ್ಟರು.

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಚಂದ್ರಮೌಳಿ, ಕೆ.ಪಿ. ಚಂದ್ರಕಲಾ, ನಾಪಂಡ ಮುತ್ತಪ್ಪ, ವಿರೂಪಾಕ್ಷಯ್ಯ, ಮಡಿಕೇರಿ ಬ್ಲಾಕ್ ಅಧ್ಯಕ್ಷ ಅಪ್ರು ರವೀಂದ್ರ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಯಾಕೂಬ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ, ಪ್ರಮುಖರಾದ ನಂದಕುಮಾರ್, ವಿ.ಪಿ. ಶಶಿಧರ್, ಅಬ್ಬಾಸ್, ಜಯೇಂದ್ರ, ಹಸೈನಾರ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಶುಭದಾಯಿನಿ, ರಮಾನಾಥ್, ತೆನ್ನೀರ ಮೈನಾ, ಎಸ್.ಎಂ. ಚಂಗಪ್ಪ, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಹಾನಗಲ್ಲು ಮಿಥುನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಸಮಿತಿ ಅಧ್ಯಕ್ಷ ಶಿವು ಮಾದಪ್ಪ, ಕೆಪಿಸಿಸಿ ಕಾರ್ಯದರ್ಶಿ ವೆಂಕಪ್ಪಗೌಡ, ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಇವರುಗಳು ಮಾತನಾಡಿದರು.