ಮಡಿಕೇರಿ, ಫೆ. 7: ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ನಾಗರಿಕರಿಗೆ ಅಗತ್ಯವಾದ ಫಾರಂ 3 ದೊರಕುವಲ್ಲಿ ವಿಳಂಬವಾಗುತ್ತಿದ್ದು, ಶೀಘ್ರದಲ್ಲಿಯೇ ನೂತನ ತಂತ್ರಜ್ಞಾನದೊಂದಿಗೆ ಸಮಸ್ಯೆ ಪರಿಹಾರವಾಗಲಿದೆ. ಈ ಹಿಂದಿದ್ದ ಆಡಳಿತ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದಾಗಿ ಹೀಗಾಗಿದ್ದು, ತಾನು ಪೌರಾಯುಕ್ತೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸಂಪೂರ್ಣವಾಗಿ ನಗರಸಭೆಯ ಆಡಳಿತ ವ್ಯವಸ್ಥೆಯನ್ನು ಸುಧಾರಿಸುತ್ತಾ ನಾಗರಿಕ ಸ್ನೇಹಿಯಾಗಿ ಪರಿವರ್ತಿಸಲಾಗುತ್ತಿದೆ ಎಂದು ನಗರಸಭಾ ಪೌರೇಯುಕ್ತ ಬಿ. ಶುಭಾ ತಿಳಿಸಿದ್ದಾರೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಗರದಲ್ಲಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದ್ದು ಬಹುತೇಕ ಕಾಮಗಾರಿ ಮುಕ್ತಾಯ ಗೊಂಡಿದೆ. ಇನ್ನೊಂದು ತಿಂಗಳಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸುವ ಚಿಂತನೆಯಿದೆ ಎಂದು ಹೇಳಿದರು. ಸುಸಜ್ಜಿತವಾಗಿ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದ್ದು, ರೂ. 50 ಲಕ್ಷ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದ್ದು, ಈ ಸಂಕೀರ್ಣದ ಕೆಳಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗುತ್ತದೆ. ಮಡಿಕೇರಿಯಲ್ಲಿ ನಿರ್ಮಾಣವಾಗು ತ್ತಿರುವ ರೂ. 3 ಕೋಟಿ ವೆಚ್ಚದ ಹೈಟೆಕ್ ಮಾರುಕಟ್ಟೆ ಕಾಮಗಾರಿ ಕೂಡ ಪ್ರಗತಿಯಲ್ಲಿದೆ ಎಂದರು.
ನನ್ನ ನಗರ ಸ್ವಚ್ಛವಾಗಿರಬೇಕೆಂಬ ಹಂಬಲ ಮಡಿಕೇರಿಯ ಪ್ರತಿಯೋರ್ವ ನಾಗರಿಕರಲ್ಲಿಯೂ ಮೂಡಿದಾಗ ಖಂಡಿತಾ ಮಡಿಕೇರಿ ಸ್ವಚ್ಛ ನಗರವಾಗಿ ಪರಿವರ್ತನೆಯಾಗುತ್ತದೆ. ಅಂತೆಯೇ ಪ್ರವಾಸಿಗರಿಂದ ಮಡಿಕೇರಿ ನಗರ ಮಾಲಿನ್ಯಗೊಳ್ಳುತ್ತಿರುವ ಅನೇಕ ನಿದರ್ಶನಗಳು ತನ್ನ ಗಮನಕ್ಕೂ ಬಂದಿದ್ದು ಈ ಸಂದರ್ಭ ಇಂಥ ಪ್ರಕರಣವನ್ನು ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೆ ಪ್ರವಾಸಿಗರಿಂದ ಉಂಟಾಗುತ್ತಿರುವ ಮಾಲಿನ್ಯ ತಪ್ಪಿಸಬಹುದು. ಮಡಿಕೇರಿಯ ಜನರೂ ಸ್ವಚ್ಛತೆಗೆ ಸಂಬಂಧಿಸಿದಂತೆ ನಾಗರಿಕ ಪೆÇಲೀಸರ ಕರ್ತವ್ಯ ನಿಭಾಯಿಸಬೇಕು ಎಂದು ಕರೆ ನೀಡಿದರು.
ತ್ಯಾಜ್ಯ ಸಂಗ್ರಹ ಘಟಕ
ಮಡಿಕೇರಿಯ ದಾಸವಾಳ ಬಡಾವಣೆಯಲ್ಲಿ ನಗರಸಭೆ ವತಿಯಿಂದ ತ್ಯಾಜ್ಯ ಸಂಗ್ರಹ ಘಟಕ ಪ್ರಾರಂಭಿಸಲಾಗುತ್ತಿದೆ. ಮಡಿಕೇರಿ ಜನ, ವರ್ತಕರು ಈ ಘಟಕಕ್ಕೆ ಯಾವಾಗ ಬೇಕಾದರೂ ಸಂಗ್ರಹಿತ ತ್ಯಾಜ್ಯವನ್ನು ಹಾಕಬಹುದು. ಈ ರೀತಿ ಸಂಗ್ರಹಿತಗೊಂಡ ತ್ಯಾಜ್ಯವನ್ನು ನಗರಸಭೆಯು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಿದೆ. ಮಡಿಕೇರಿಯಲ್ಲಿ ಮುಂದಿನ ದಿನಗಳಲ್ಲಿ ಇಂಥಹ ಮೂರು ತ್ಯಾಜ್ಯ ಸಂಗ್ರಹ ಘಟಕ ಆರಂಭಿಸುವ ಉದ್ದೇಶವಿದೆ ಎಂದೂ ಪೌರಾಯುಕ್ತೆ ಮಾಹಿತಿ ನೀಡಿದರು.
ಮಡಿಕೇರಿಯಲ್ಲಿ ತ್ಯಾಜ್ಯ ವಿಲೇವಾರಿ ಸಂಬಂಧಿತ ಇರುವ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಅವರು, ತ್ಯಾಜ್ಯ ವಿಲೇವಾರಿಗೆ ನಿಗದಿಪಡಿಸಿರುವ 6 ಎಕರೆ ಪ್ರದೇಶ ಬೆಟ್ಟದಲ್ಲಿದ್ದು ಹಸಿ, ಒಣ ಕಸ ಬೇರ್ಪಡಿಸುವ ಘಟಕ ಕೆಲವೊಂದು ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ. ಮಡಿಕೇರಿಗೆ ಸಂತೆ ದಿನವಾದ ಶುಕ್ರವಾರ ಹೊರ ಊರುಗಳಿಂದ ಬರುವ ವ್ಯಾಪಾರಿಗಳು ಪ್ಲಾಸ್ಟಿಕ್ ಅನ್ನು ಹೆಚ್ಚಾಗಿ ತರುತ್ತಿದ್ದು ಈ ನಿಟ್ಟಿನಲ್ಲಿ ಮಡಿಕೇರಿ ಹೊರವಲಯದಲ್ಲಿನ ಗ್ರಾಮ ಪಂಚಾಯಿತಿಗಳು ವ್ಯಾಪಾರಿಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವ ಅಗತ್ಯವಿದೆ. ಅಂತೆಯೇ ಮುಂದಿನ ದಿನಗಳಲ್ಲಿ ಮಡಿಕೇರಿಯಲ್ಲಿಯೂ ಪ್ಲಾಸ್ಟಿಕ್ ಬಳಸದಂತೆ ಸಾಕಷ್ಟು ಜಾಗೃತಿ ಸಂದೇಶ ಸಾರಲಾಗುತ್ತದೆ. ಸ್ವಚ್ಛತಾ ಜಾಗೃತಿ ಜಾಥಾವನ್ನು ಪರಿಣಾಮಕಾರಿಯಾಗಿ ನಗರದಲ್ಲಿ ಶೀಘ್ರವೇ ಆಯೋಜಿಸಲಾಗುತ್ತದೆ. ಮಡಿಕೇರಿ ನಾಗರಿಕರ ಪ್ರತೀ ಮನೆ ಮನೆಗೂ ಕಸದಬುಟ್ಟಿ ನೀಡುವ ಯೋಜನೆಗೂ ನಗರಸಭೆ ಶೀಘ್ರವೇ ಚಾಲನೆ ನೀಡಲಿದೆ ಎಂದು ಶುಭಾ ವಿವರಿಸಿದರು.
ವೈಯಕ್ತಿಕ ಶೌಚಾಲಯ ಯೋಜನಾ ಗುರಿ
33 ಸಾವಿರ ಜನರಿರುವ ಮಡಿಕೇರಿ ನಗರದ ಬಹುತೇಕ ಮನೆಗಳಲ್ಲಿ ಶೌಚಾಲಯವಿದ್ದು, ತೀವ್ರ ಬಡತನದಿಂದಾಗಿ ಶೌಚಾಲಯ ಕಟ್ಟಿಸಿಕೊಳ್ಳಲು ಅಸಾಧ್ಯವಾದವರಿಗೆ ಸರ್ಕಾರದ ಅನುದಾನದಿಂದಲೇ ಶೌಚಾಲಯ ನಿರ್ಮಿಸಿ ಕೊಡಲಾಗುತ್ತದೆ. ಇಂಥಹ 33 ಮನೆಗಳನ್ನು ಗುರುತಿಸಲಾಗಿದ್ದು ಅಗತ್ಯ ಅನುದಾನ ಕಾಯ್ದಿರಿಸಲಾಗಿದೆ ಎಂದು ಅವರು ವಿವರಣೆ ನೀಡಿದರು.
2019 ರೊಳಗಾಗಿ ಮಡಿಕೇರಿಯನ್ನು ವೈಯಕ್ತಿಕ ಶೌಚಾಲಯವನ್ನು ಶೇ. 100 ರಷ್ಟು ಹೊಂದಿರುವ ನಗರವನ್ನಾಗಿ ರೂಪಿಸುವ ಗುರಿಯಿದ್ದರೂ ಈ ಗುರಿಯನ್ನು ನಗರಸಭೆ 2018 ರಲ್ಲಿಯೇ ತಲುಪಲಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಮಡಿಕೇರಿಯ ರಸ್ತೆಗಳನ್ನು ಹಾಳುಗೆಡವಿದ ಯುಜಿಡಿ ಕಾಮಗಾರಿಗೆ ಸಂಬಂಧಿಸಿದಂತೆ ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರಿಂದ ಕೇಳಿ ಬಂದ ಪ್ರಶ್ನೆಗಳಿಗೆ ಉತ್ತರಿಸಿದ ಶುಭಾ, ಸರ್ಕಾರದ ಪ್ರಮುಖ ಯೋಜನೆ ಯಾದ ಯುಜಿಡಿ ಕಾಮಗಾರಿಯನ್ನು ತಡೆಯಲು ಅಸಾಧ್ಯ. ಗುಡ್ಡಗಾಡು ಮಡಿಕೇರಿ ನಗರದಲ್ಲಿ ಇನ್ನಷ್ಟು ವೈಜ್ಞಾನಿಕ ರೀತಿಯಲ್ಲಿ ಯುಜಿಡಿ ಕಾಮಗಾರಿಯನ್ನು ಅಳವಡಿಸುವ ಅಗತ್ಯವಿತ್ತು. 112 ಕಿ.ಮೀ. ಗುರಿ ಪೈಕಿ ಈಗಾಗಲೇ 58 ಕಿ.ಮೀ. ಮುಗಿದಿದ್ದು 54 ಕಿ.ಮೀ. ಬಾಕಿಯಿದೆ. ಮಳೆಗಾಲಕ್ಕೂ ಮುನ್ನ ಬಹುತೇಕ ವಾರ್ಡ್‍ಗಳಲ್ಲಿ ಯುಜಿಡಿ ಕಾಮಗಾರಿ ಯಿಂದ ದುರಸ್ತಿಗೀಡಾದ ರಸ್ತೆಯ ದುರಸ್ತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಚ್.ಟಿ. ಅನಿಲ್ ಮಾತನಾಡಿ, ಮಡಿಕೇರಿಯನ್ನು ಸ್ವಚ್ಛ ನಗರವನ್ನಾಗಿ ಸುವ ನಗರಸಭೆಯ ಉದ್ದೇಶಕ್ಕೆ ಮಿಸ್ಟಿ ಹಿಲ್ಸ್ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಎಂ. ಸಂದೀಪ್ ಸ್ವಾಗತಿಸಿ, ಸದಸ್ಯೆ ಅನಿತಾ ಪೂವಯ್ಯ ನಿರೂಪಿಸಿ, ಡಾ. ಕುಲಕರ್ಣಿ ವಂದಿಸಿದ ಕಾರ್ಯಕ್ರಮದಲ್ಲಿ ರೋಟರಿ ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ, ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ ಉಪಸ್ಥಿತರಿದ್ದರು.