*ಗೋಣಿಕೊಪ್ಪಲು, ಫೆ. 7: ಅಂದಾಜು 8 ರಿಂದ 9 ವರ್ಷ ಪ್ರಾಯದ ಹೆಣ್ಣು ಹುಲಿಯೊಂದು ಮೃತಪಟ್ಟಿರುವ ಘಟನೆ ನಾಗರಹೊಳೆ ವನ್ಯಜೀವಿ ವಿಭಾಗದ ಆಯಿರಹೊಸಳ್ಳಿ ಅರಣ್ಯದಲ್ಲಿ ಜರುಗಿದೆ. ಹುಲಿ ಮೂರು ದಿನದ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಹುಲಿಯ ಕಣ್ಣಿನ ಭಾಗದಲ್ಲಿ ಗಾಯವಾಗಿದೆ. ಅದರ ಎದೆಯ ಭಾಗದಲ್ಲಿ ಮುಳ್ಳು ಹಂದಿಯ ಮುಳ್ಳು ನಾಟಿಕೊಂಡು ತೀವ್ರ ಗಾಯವಾಗಿದೆ. ಪ್ರಾಯಶಃ ಮುಳ್ಳು ಹಂದಿಯನ್ನು ಬೇಟೆಯಾಡುವ ಸಂದರ್ಭ ಈ ಅಪಾಯ ಸಂಭವಿಸಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಅರಣ್ಯ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ಸಂದರ್ಭ ಆಯಿರಹೊಸಳ್ಳಿಯ ಕೆ.ಎಂ. ಕೊಲಿ ಸ್ಥಳದಲ್ಲಿ ಹುಲಿ ಮೃತಪಟ್ಟಿರುವದು ಗೋಚರಿಸಿದೆ. ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಆನಂತರ ಹುಲಿ ಸಾವಿನ ಖಚಿತ ಮಾಹಿತಿ ದೊರೆಯಲಿದೆ ಎಂದು ಮತ್ತಿಗೋಡು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ತಿಳಿಸಿದ್ದಾರೆ.

- ಎನ್.ಎನ್. ದಿನೇಶ್