ಸೋಮವಾರಪೇಟೆ, ಫೆ. 6: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿ.ಪಂ., ಪುತ್ತೂರು ತಾ.ಪಂ., ಜಿಲ್ಲಾ ಮತ್ತು ರಾಜ್ಯ ಯುವ ಒಕ್ಕೂಟಗಳ ಆಶ್ರಯದಲ್ಲಿ ಪುತ್ತೂರಿನ ಸುದಾನ ವಸತಿ ಶಾಲಾ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಯುವಜನ ಮೇಳದಲ್ಲಿ ಕೊಡಗು ಜಿಲ್ಲಾ ತಂಡ ಪ್ರಶಸ್ತಿಗೆ ಭಾಜನವಾಗಿದೆ.

ಕೊಡಗು ಜಿಲ್ಲಾ ಮಟ್ಟದ ಯುವಜನ ಮೇಳದ ರಾಗಿ-ಜೋಳ ಬೀಸುವ ಪದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಕೊಡಗು ತಂಡದ ಕೆ.ಆರ್. ಚಂದ್ರಿಕಾ ಮತ್ತು ಕೆ.ಡಿ. ಚಂದ್ರಕಲಾ ಅವರುಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ರಾಜ್ಯದ 30 ಜಿಲ್ಲೆಗಳಿಂದ ಸ್ಪರ್ಧಿಗಳು ಭಾಗಿಯಾಗಿದ್ದ ಸ್ಪರ್ಧೆಯಲ್ಲಿ ಸೋಮವಾರಪೇಟೆ ತಾಲೂಕಿನ ಕಿರಗಂದೂರು ಗ್ರಾಮದ ಪ್ರಕೃತಿ ಯುವತಿ ಮಂಡಳಿಯ ಸದಸ್ಯರುಗಳಾದ ಚಂದ್ರಿಕಾ ಮತ್ತು ಚಂದ್ರಕಲಾ ಅವರುಗಳು ಕೊಡಗು ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದರು.

ಸುಮಾರು 15 ವರ್ಷಗಳಿಂದ ರಾಜ್ಯಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸುತ್ತಿರುವ ಈ ತಂಡ, ಕಳೆದ 10 ವರ್ಷಗಳಿಂದ ನಿರಂತರವಾಗಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಪಡೆಯುತ್ತಿದೆ.