ಮಡಿಕೇರಿ, ಫೆ. 4: ಪೊಲೀಸರು ಮತ್ತು ಮಾಧ್ಯಮಗಳು ಸಮಾಜದ ತಪ್ಪು ಒಪ್ಪುಗಳನ್ನು ತಿದ್ದುತ್ತಾ ಮುನ್ನಡೆದರೂ ಪೊಲೀಸರಿಗಿಂತ ಮಾಧ್ಯಮಗಳಿಗೆ ಹೆಚ್ಚಿನ ಜವಬ್ದಾರಿ ಇದೆ ಎಂದು ಡಿವೈಎಸ್ಪಿ ಸುಂದರ್ ರಾಜ್ ಅಭಿಪ್ರಾಯಪಟ್ಟರು.
ಕೊಡಗು ಪ್ಲೆಸ್‍ಕ್ಲಬ್‍ನ 19ನೇ ವಾರ್ಷಿಕೋತ್ಸವ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ನಡೆದ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾಧ್ಯಮಗಳು ಜನರ ನಾಡಿಮಿಡಿತ ಅರಿತು ಕೆಲಸ ಮಾಡಬೇಕಿದೆ. ಪೊಲೀಸರು ಮತ್ತು ಪತ್ರಕರ್ತರನ್ನು ಸೇರಿಸಿ ಕ್ರೀಡಾಕೂಟ ಆಯೋಜಿಸುವ ಚಿಂತನೆ ಇದೆ ಎಂದು ಹೇಳಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಶ್ರಮಿಸುತ್ತಿರುವ ಮಾಧ್ಯಮಗಳಿಗೆ ಸರ್ಕಾರಗಳಿಂದ ಯಾವದೇ ಸ್ಪಂದನ ಇಲ್ಲದಿರುವದು ವಿಷಾದನೀಯ.
ರಾಜಕೀಯವಾಗಿ ಕೊಡಗು ನಿರ್ಲಕ್ಷ್ಯಕ್ಕೆ ತುತ್ತಾಗಿರುವದರ ಜೊತೆಗೆ ಇಲ್ಲಿನ ಮಾಧ್ಯಮ ಪ್ರತಿನಿಧಿಗಳನ್ನು ಕೂಡ ಸರ್ಕಾರಗಳು ನಿರ್ಲಕ್ಷಿಸುತ್ತಿವೆ. ನಿವೇಶನ, ಆರೋಗ್ಯ ಸೌಲಭ್ಯ ಇತ್ಯಾದಿಗಳು ಬೇರೆ ಜಿಲ್ಲೆಗಳಲ್ಲಿ ಕಾರ್ಯಗತವಾಗುತ್ತಿದ್ದರೂ ಕೊಡಗಿನಲ್ಲಿ ಯಾವದೇ ಸ್ಪಂದನೆ ಇಲ್ಲದಿರುವದು ಸರಿಯಲ್ಲ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಾಧ್ಯಮ ಪ್ರತಿನಿಧಿಗಳಿಗೆ ಸೌಲಭ್ಯದ ಭರವಸೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಮೂಗಿನ ಮೇಲೆ ಬೆಣ್ಣೆ ಸವರುವ ಕೆಲಸ ಆಗುತ್ತಿದೆ ಎಂದು ವಿಷಾದಿಸಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪಾರ್ಥಚಿಣ್ಣಪ್ಪ ಮಾತನಾಡಿ ಪತ್ರಕರ್ತರು ವೃತ್ತಿ ಮತ್ತು ಮನರಂಜನೆಯನ್ನು ಸರಿ ಸಮಾನವಾಗಿ ಸ್ವೀಕರಿಸಬೇಕೆಂದರು.
ಸಂಘದ ಉಪಾಧ್ಯಕ್ಷ ಜಿ.ವಿ. ರವಿಕುಮಾರ್ ಮಾತನಾಡಿ ಪ್ರೆಸ್‍ಕ್ಲಬ್ ವಾರ್ಷಿಕೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ, ಪ್ರಸ್ತುತ ಅನಾರೋಗ್ಯದಿಂದ ಬಳಲುತ್ತಿರುವ ಶಶಿ ಸೋಮಯ್ಯ ಅವರನ್ನು ಸ್ಮರಿಸಿಕೊಂಡರು.
ಇದೇ ವೇಳೆ ಸಂಕೇತ್ ಪೂವಯ್ಯ ಹಾಗೂ ಸುಂದರ್ ರಾಜ್ ಟೇಬಲ್ ಟೆನ್ನಿಸ್ ಆಡುವ ಮೂಲಕ ಒಳಾಂಗಣ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಕೊಡಗು ಪ್ರೆಸ್‍ಕ್ಲಬ್ ಉಪಾಧ್ಯಕ್ಷ ಸುಬ್ರಮಣಿ, ಖಜಾಂಚಿ ರಜಿತ್ ಕುಮಾರ್, ಸಂಘಟನಾ ಕಾರ್ಯದರ್ಶಿ ಅಜೀಜ್, ಜಂಟಿ ಕಾರ್ಯದರ್ಶಿ ವಿಘ್ನೇಶ್ ಎಂ. ಭೂತನಕಾಡು ಮತ್ತಿತರರು ಹಾಜರಿದ್ದರು. ವಿವಿಧ ಒಳಾಂಗಣ ಕ್ರೀಡಾಸ್ಪರ್ಧೆಗಳು ನಡೆದವು.