ಮಡಿಕೇರಿ, ಫೆ. 2 : ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆಯನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ಬಳಿಕ ಬಿಜೆಪಿ ಹಾಗೂ ಆರ್ಎಸ್ಎಸ್ ಕಾರ್ಯ ಕರ್ತರ ಹತ್ಯೆ ಮುಂದು ವರಿದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ರಾಜ್ಯದಲ್ಲಿ ನಡೆದ ಹಿಂದೂ ಸಂಘಟನೆಗಳ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂತೋಷ್ ಹತ್ಯೆ ಪ್ರಕರಣವನ್ನು ಎನ್ಐಎ ತನಿಖೆ ವಹಿಸಬೇಕು. ಮೃತ ಸಂತೋಷ್ ಕುಟುಂಬಕ್ಕೆ ರೂ. 50 ಲಕ್ಷ ಪರಿಹಾರ ಪರಿಹಾರ ನೀಡಬೇಕು. ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು. ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ ರಾಜ್ಯದಲ್ಲಿ ಹಿಂದೂಗಳ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ವಿದ್ರೋಹಿ ಧೋರಣೆಯೇ ಕಾರಣವಾಗಿದೆ. ಮೂಲಭೂತ ವಾದಿಗಳಿಂದ ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್ ಎಂಬಾತನ ಹತ್ಯೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತನ ಮನೆಗೆ ತೆರಳಿ ಸಾಂತ್ವನ ಹೇಳುವದು ಬಿಟ್ಟು, ಪಕ್ಕದಲ್ಲಿಯೇ ಸಚಿವರೊಬ್ಬರ ಮನೆಯಲ್ಲಿ ಔತಣಕೂಟದಲ್ಲಿ ಭಾಗಿಯಾಗಿದ್ದರು ಎಂದು ಟೀಕಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ರಾಜ್ಯ ಸರ್ಕಾರ ಕೆಎಫ್ಡಿ, ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳ ಕಾರ್ಯ ಕರ್ತರ ವಿರುದ್ಧ ಪೊಲೀಸರು ದಾಖಲಿಸಿದ್ದ ಮೊಕದ್ದಮೆಗಳನ್ನು ಹಿಂಪಡೆಯಲು ಮುಂದಾಗಿರುವದೇ ಮೂಲಭೂತವಾದಿಗಳಿಗೆ ಪ್ರೇರಣೆ ನೀಡಿದಂತಾಗಿದೆ. ಪ್ರಾಮಾಣಿಕ ಪೊಲೀಸರ ಆತ್ಮಸ್ಥೈರ್ಯವನ್ನು ರಾಜ್ಯ ಸರ್ಕಾರ ಕುಗ್ಗಿಸುತ್ತಿದ್ದು, ಕಾಂಗ್ರೆಸ್ ಸರ್ಕಾರದಿಂದ ಹಿಂದೂಗಳ ರಕ್ಷಣೆ ಸಾಧ್ಯವಿಲ್ಲ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರಾಬಿನ್ ದೇವಯ್ಯ, ಬಾಲಚಂದ್ರ ಕಳಗಿ, ಕಾಂತಿ ಸತೀಶ್, ಜಿಲ್ಲಾ ವಕ್ತಾರ ನಾಪಂಡ ರವಿ ಕಾಳಪ್ಪ, ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಸ್.ಸಿ. ಸತೀಶ್, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಬಿ.ವೈ. ರಘು ಆನಂದ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಯಮುನಾ ಚಂಗಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷೆ ಕವಿತಾ ಪ್ರಭಾಕರ್, ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಅಧ್ಯಕ್ಷ ಅಪ್ಪಣ್ಣ, ನಗರ ಅಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಪ್ರಮುಖರಾದ ಬಿ. ಶಿವಪ್ಪ, ಕಾಂಗೀರ ಸತೀಶ್, ಉಷಾ ದೇವಮ್ಮ, ಸವಿತಾ ರಾಕೇಶ್, ಲಕ್ಷ್ಮಿ ಹಾಗೂ ಇನ್ನಿತರರು ಇದ್ದರು.