ಕುಶಾಲನಗರ, ಫೆ. 2 : ದುಬಾರೆ ಸಾಕಾನೆ ಶಿಬಿರದಿಂದ ಸಾಕಾನೆಗಳನ್ನು ಬೇರೆ ರಾಜ್ಯಕ್ಕೆ ಕಳಿಸಲು ಅಡ್ಡಿಯುಂಟು ಮಾಡುವದರೊಂದಿಗೆ ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡಿದ ಆರೋಪದ ಹಿನ್ನಲೆಯಲ್ಲಿ ನಾಲ್ವರು ಆನೆ ಮಾವುತರಿಗೆ ಇಲಾಖೆ ಕಾರಣ ಕೇಳಿ ನೋಟಿಸ್ ನೀಡಿದ ಬಗ್ಗೆ ವರದಿಯಾಗಿದೆ.

ಇತ್ತೀಚೆಗೆ ದುಬಾರೆ ಸಾಕಾನೆ ಶಿಬಿರದ ಆನೆಗಳಾದ ಅಜ್ಜಯ್ಯ, ತೀರ್ಥರಾಮ, ಪರಶುರಾಮ ಆನೆಗಳನ್ನು ದುಬಾರೆ ಆನೆ ಶಿಬಿರದಿಂದ ಛÀತ್ತೀಸ್‍ಘಡ ರಾಜ್ಯಕ್ಕೆ ಕಳುಹಿಸಿಕೊಡುವ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಮಾವುತರು, ಕವಾಡಿಗರಿಗೂ ತಿಳಿಸಿದರೂ ಈ ಆದೇಶ ಪಾಲನೆ ಮಾಡದೆ ಸರಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿರುವದಾಗಿ ತೀರ್ಥರಾಮ, ಕಾವೇರಿ, ಶ್ರೀರಾಮ, ಅಜ್ಜಯ್ಯ ಆನೆಗಳ ಸಿಬ್ಬಂದಿಗಳಿಗೆ ಸ್ತಳೀಯ ವಲಯ ಅರಣ್ಯಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇದರೊಂದಿಗೆ ಮಾಧ್ಯಮದವರನ್ನು ಕರೆಸಿ ಹೇಳಿಕೆಗಳನ್ನು ನೀಡಿರುವದಾಗಿ ತಿಳಿಸಿರುವ ಅಧಿಕಾರಿಗಳು ಆನೆಗಳಿಗೆ ನೀರು ಹಾಗೂ ಆಹಾರ ನೀಡದೆ ಕಾಡಿನಲ್ಲಿ ಯಾರಿಗೂ ತಿಳಿಯದಂತೆ ಕಟ್ಟಿ ಹಾಕಿರುವದು ಈ ಎಲ್ಲಾ ಪ್ರಕರಣಗಳು ಸರಕಾರದ ನಿಯಮಗಳಿಗೆ ಉಲ್ಲಂಘನೆಯಾಗಿದ್ದು ತಕ್ಷಣ ಸಮಜಾಯಿಷಿಕೆ ನೀಡುವಂತೆ ನಾಲ್ವರು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ.