ಮಡಿಕೇರಿ, ಫೆ. 2: ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಮಡಿಕೇರಿಯಲ್ಲಿ ಆರಂಭಗೊಂಡ ರೈತ ಸಂತೆಗೆ ವಾರ ನಾಲ್ಕಾಯಿತು. ರೈತರು ತಾವೂ ಬೆಳೆದ ತಾಜಾ ತರಕಾರಿ ಪದಾರ್ಥಗಳನ್ನು ಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ಜನತೆಯ ಸೂಕ್ತ ಸ್ಪಂದನೆಯ ಅಗತ್ಯತೆ ಕಂಡು ಬರುತ್ತಿದೆ.
ಮಡಿಕೇರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕಳೆದ ಮೂರು ವಾರಗಳ ಹಿಂದೆ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುತುವರ್ಜಿಯಿಂದ ರೈತ ಸಂತೆ ಆರಂಭಗೊಂಡಿತು. ವಾರದ ಪ್ರತೀ ಶುಕ್ರವಾರ ರೈತರು ತಾವೂ ಬೆಳೆದ ತರಕಾರಿ ಪದಾರ್ಥಗಳನ್ನು ಇಲ್ಲಿ ಮಾರಾಟ ಮಾಡುವ ಅನುಕೂಲವನ್ನು ಸಮಿತಿ ಕಲ್ಪಿಸಿತ್ತು. ಆರಂಭದ ವಾರದಿಂದಲೇ ಮಡಿಕೇರಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ರೈತರು ತಾವೂ ಬೆಳೆದ ಸೊಪ್ಪು, ತರಕಾರಿ, ಬಾಳೆ, ಗೆಡ್ಡೆ ಗೆಣಸುಗಳನ್ನು, ನಾಡು ಕೋಳಿಗಳನ್ನು ತಂದು ಮಾರಾಟ ಮಾಡಲು ಆರಂಭಿಸಿದರು. ಕಳೆದ ಮೂರು ವಾರಗಳಿಂದಲೂ ರೈತ ಸಂತೆ ಯಶಸ್ವಿಯಾಗಿ ಸಾಗುತ್ತಿದ್ದು, ಇದೀಗ ನಾಲ್ಕನೇ ವಾರದ ಸಂತೆ ನಡೆಯುತ್ತಿದೆ. ಸಂತೆಯಲ್ಲಿ 10-12 ತಾಜಾ ತರಕಾರಿ ಅಂಗಡಿಗಳಿದ್ದು, ನಾಡು ಕೋಳಿ, ತಾಜಾ ಹಸಿ ಮೀನು ಮಾರಾಟವೂ ಮಾಡಲಾಗುತ್ತಿದೆ.
ಆರಂಭದಿಂದಲೇ ರೈತಸಂತೆಯಲ್ಲಿ ನಗರದ ಜನತೆ ಹೆಚ್ಚಾಗಿ ತರಕಾರಿಗಳನ್ನು ಖರೀದಿಸುವದು ಕಂಡು ಬರುತಿದ್ದು, ಗ್ರಾಮೀಣ ಭಾಗದ ಜನತೆ ವಿರಳವಾಗಿ ಕಂಡುಬರುತ್ತಿದ್ದಾರೆ. ಆದರೂ ಕೆಲವು ರೈತರ ತರಕಾರಿಗಳು ಮಧ್ಯಾಹ್ನವಾಗುವಷ್ಟರಲ್ಲಿಯೇ ಮಾರಾಟವಾಗುತ್ತಿದ್ದು, ರೈತರು ಸಂತಸಗೊಂಡಿದ್ದಾರೆ. ತರಕಾರಿ ಖರೀದಿಗಾಗಿ ಆಗಮಿಸುವ ಜನತೆಗೂ ಇಲ್ಲಿ ಯಾವದೇ ಟ್ರಾಫಿಕ್ ಸಮಸ್ಯೆ ಕಂಡು ಬರದಿರುವದರಿಂದ ತರಕಾರಿ ಖರೀದಿಯಲ್ಲಿ ಉತ್ಸಾಹ ತೋರುತ್ತಿದ್ದಾರೆ. ಇಲ್ಲಿ ವಿಶಾಲವಾದ ಪಾರ್ಕಿಂಗ್ ಸೌಲಭ್ಯವಿರುವದು ಒಂದು ರೀತಿಯಲ್ಲಿ ರೈತರಿಗೂ ಹಾಗೂ ತರಕಾರಿ ಖರೀದಿಸುವ ಜನತೆಗೂ ಅನುಕೂಲ ಕಲ್ಪಿಸಿದಂತಾಗಿದೆ.
ಕಾಟಕೇರಿಯ ಶಿವಪ್ರಕಾಶ್, ಅಪ್ಪಂಗಳ ಚಂದ್ರಕಲಾ ಹಾಗೂ ಇತರರು ‘ಶಕ್ತಿ’ಯೊಂದಿಗೆ ಮಾತನಾಡಿ ಕಳೆದ ನಾಲ್ಕು ವಾರಗಳಿಂದಲೂ ಮಾರುಕಟ್ಟೆಗೆ ನಾವು ಬೆಳೆದ ತರಕಾರಿಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ. ರೈತ ಸಂತೆ ಆರಂಭಿಸಿರುವದು ಸಂತಸವಾಗಿದೆ. ನಾವು ತಂದ ತರಕಾರಿಗಳು ಮಾರಾಟವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.ಜನರ ಸ್ಪಂದನೆ ಅಗತ್ಯ
ಗ್ರಾಮೀಣ ಭಾಗದ ರೈತರು ತಾವು ಬೆಳೆದ ತಾಜಾ ತರಕಾರಿ ಪದಾರ್ಥಗಳನ್ನು ರೈತ ಸಂತೆಯಲ್ಲಿ ಅತೀ ಉತ್ಸಾಹದಿಂದಲೇ ಮಾರಾಟ ಮಾಡುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಭಾಗದ ನೈಜ ರೈತರ ಆರ್ಥಿಕ ಬೆಳವಣಿಗೆಗೆ ನಾಡಿನ ಜನರ ಸ್ಪಂದನೆ ಅಗತ್ಯವಿದೆ.
ಬೆಲೆ ಕಡಿಮೆ : ಹರೀಶ್
ಕಳೆದ ಮೂರು ವಾರದಿಂದ ರೈತ ಸಂತೆಗೆ ಆಗಮಿಸುತ್ತಿದ್ದೇನೆ. ಹಳೇ ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿ ಇದೆ. ರೈತ ಸಂತೆಯಲ್ಲಿ ತರಕಾರಿ ಬೆಳೆ ಕಡಿಮೆಯಿದೆ. ಅಲ್ಲದೆ ರೈತರು ಸಗಣಿ ಮತ್ತು ಸಾವಯವ ಪದ್ಧತಿಯಿಂದ ತರಕಾರಿ ಬೆಳೆಯುತ್ತಿದ್ದಾರೆ. ಆರೋಗ್ಯಕ್ಕೂ ಒಳ್ಳೆಯದು ಎಂದು ಹೊಸಬಡಾವಣೆಯ ವ್ಯಾಪಾರಿ ಎ.ಜೆ. ಹರೀಶ್ ಹೇಳುತ್ತಾರೆ.
ಜನರ ಸ್ಪಂದನೆ ಇದೆ : ಚುಮ್ಮಿ
ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ರೈತ ಸಂತೆ ಆರಂಭಿಸಿರುವದು ಸಂತೋಷವಾಗಿದೆ. ಮಡಿಕೇರಿ ಪಟ್ಟಣ ಬೆಳೆಯುತ್ತಿದೆ. ಇಲ್ಲಿನ ಸಂತೆ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ. ಕಳೆದ 2 ವಾರಗಳಿಂದ ಸಂತೆಗೆ ಪತ್ನಿ ಸಮೇತವಾಗಿ ನೆರೆಹೊರೆಯವರೊಂದಿಗೆ ಒಟ್ಟಿಗೆ ಆಗಮಿಸುತ್ತಿದ್ದೇನೆ. ರೈತ ಸಂತೆಗೆ ಜನರ ಸ್ಪಂದನೆಯೂ ಇದೆ ಎಂದು ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ ಅಭಿಪ್ರಾಯಪಡುತ್ತಾರೆ.
ತೃಪ್ತಿ ಇದೆ : ಸತೀಶ್
ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ರೈತ ಸಂತೆ ಆರಂಭಿಸಿ ತರಕಾರಿ ಮಾರಾಟಗಾರರಿಗೆ ಅನುಕೂಲ ಕಲ್ಪಿಸಿರುವದು ತನಗೂ ಹಾಗೂ ಮಾರಾಟಗಾರರಿಗೂ ತೃಪ್ತಿ ತಂದಿದೆ. ಬೆಳಿಗ್ಗೆ ಮತ್ತು ಮಧ್ಯಾಹ್ನ ಹೆಚ್ಚಾಗಿ ತರಕಾರಿ ಖರೀದಿಸಲು ಜನತೆ ಆಗಮಿಸುತ್ತಿದ್ದಾರೆ. ಹೆಚ್ಚಾಗಿ ನಗರದ ಜನತೆ ಮತ್ತು ಸರ್ಕಾರಿ ಉದ್ಯೋಗಿಗಳೇ ಆಗಮಿಸುತ್ತಿದ್ದಾರೆ. ಗ್ರಾಮೀಣ ಭಾಗದ ರೈತರಿಗೆ ಜನತೆಯ ಸಹಕಾರ ಹಾಗೂ ಸ್ಪಂದನೆಯ ಅಗತ್ಯವಿದೆ ಎಂದು ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕಾಂಗೀರ ಸತೀಶ್ ‘ಶಕ್ತಿ’ಯೊಂದಿಗೆ ಅಭಿಪ್ರಾಯಪಟ್ಟರು. -ಚಂದ್ರ