ಮಡಿಕೇರಿ, ಫೆ. 3: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸೊಂದು, ಮುಂದುಗಡೆ ಹೋಗುತ್ತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿಕಪ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಂಬ ಮುರಿದು ಹೋಗಿದೆ.

ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮಂಗಳೂರಿನಿಂದ ಬರುತ್ತಿದ್ದ ಬಸ್ ಕೊಯನಾಡು ಶಾಲೆಯ ಬಳಿ ಮುಂದುಗಡೆ ತೆರಳುತ್ತಿದ್ದ ಪಿಕಪ್ ವಾಹನಕ್ಕೆ (ಕೆಎ 45-8764) ಡಿಕ್ಕಿಯಾಗಿದೆ. ಪರಿಣಾಮ ಜಲ್ಲಿ ಸಾಗಿಸುತ್ತಿದ್ದ ವಾಹನ ರಸ್ತೆಯ ಎಡಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ.

ರಾಜ್ಯ ಸಾರಿಗೆ ಬಸ್ ಚಾಲಕ (ಕೆಎ 19 ಎಫ್ 3306) ಪಿ. ಪಾಂಡು ಹಾಗೂ ಪಿಕಪ್ ಚಾಲಕ ಗಣೇಶ ಹಾಗೂ ಇತರರು ಅಪಾಯದಿಂದ ಪಾರಾಗಿದ್ದಾರೆ. ಬದಲಾಗಿ ಎರಡು ವಾಹನಗಳು ಜಖಂಗೊಂಡಿವೆ. ಸಕಾಲದಲ್ಲಿ ಹೆದ್ದಾರಿ ಸುರಕ್ಷಾ ಪೊಲೀಸ್ ವಾಹನ ಧಾವಿಸುವದರೊಂದಿಗೆ ಮುಂದಿನ ಕ್ರಮ ಜರುಗಿಸಲಾಗಿದೆ. ಅಲ್ಲದೆ ಚೆಸ್ಕಾಂ ಸಿಬ್ಬಂದಿ ಧಾವಿಸಿ ಮುರಿದು ಹೋಗಿದ್ದ ವಿದ್ಯುತ್ ಕಂಬವನ್ನು ಬದಲಾಯಿಸಿ ಹೊಸ ಕಂಬ ಅಳವಡಿಸಿದ್ದಾರೆ.