ಮಡಿಕೇರಿ, ಫೆ. 3: ಸಂಪಾಜೆ ಗ್ರಾ.ಪಂ. ವ್ಯಾಪ್ತಿಯ ಕೊಯನಾಡು ಗುಡ್ಡಗದ್ದೆ ಪರಿಸರದಲ್ಲಿ ನಿನ್ನೆ ಸಂಜೆಗತ್ತಲೆ ನಡುವೆ ಕಾಣಿಸಿಕೊಂಡಿರುವ ಮೂವರು ನಕ್ಸಲರ ವಿರುದ್ಧ ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದಾರೆ. ನಿನ್ನೆ ರಾತ್ರಿಯಿಂದಲೇ ಕೊಡಗು ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದೆ.

ಇನ್ನೊಂದೆಡೆ ಕೊಡಗು ನಕ್ಸಲ್ ನಿಗ್ರಹ ದಳ, ಹೆಗ್ಗಡ ದೇವನ ಕೋಟೆಯ ಬೀಚನಹಳ್ಳಿಯ ನಕ್ಸಲ್ ನಿಗ್ರಹ ಪಡೆ ಕೊಡಗು ಪೊಲೀಸ್ ಘಟಕದೊಂದಿಗೆ ವ್ಯಾಪಕ ಕಾರ್ಯಾಚರಣೆಯಲ್ಲಿ ತೊಡಗಿದೆ. ಅತ್ತ ಮಂಗಳೂರಿನ ನಕ್ಸಲ್ ನಿಗ್ರಹ ದಳ ಕೂಡ ಕೊಯನಾಡು ವ್ಯಾಪ್ತಿಯ ಚಡಾವು, ಅರೆಕಲ್ಲು, ಸುಬ್ರಹ್ಮಣ್ಯ ಸುತ್ತಮುತ್ತಲಿನ ಅರಣ್ಯದೆಲ್ಲೆಡೆ ನಾಕಾಬಂದಿ ಕಾರ್ಯಾಚರಣೆ ಯಲ್ಲಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಡಿವೈಎಸ್ಪಿ ಸುಂದರರಾಜ್, ಪ್ರೊಬೆಷನರಿ ಎಸ್ಪಿ ಯತೀಶ್ ಸಹಿತ ಹೆಚ್ಚಿನ ಪೊಲೀಸ್ ಪಡೆಯೊಂದಿಗೆ ಶಸ್ತ್ರಸಜ್ಜಿತ ನಕ್ಸಲ್ ನಿಗ್ರಹದಳ ‘ಕೋಂಬಿಂಗ್’ನಲ್ಲಿ ತೊಡಗಿಸಿಕೊಂಡಿದೆ.

ನಿನ್ನೆ ರಾತ್ರಿ ಗುಡ್ಡಗದ್ದೆ ನಿವಾಸಿ ಶಂಕಪ್ಪ ಅವರ ಮನೆಯಿಂದ ಕಾರ್ಗತ್ತಲೆ ನಡುವೆ ಮೂವರು ನಕ್ಸಲರು ತೆರಳಿರುವ ಮಾರ್ಗದ ಜಾಡು ಹಿಡಿದಿರುವ ಪೊಲೀಸ್ ಕಾರ್ಯಪಡೆ, ನಕ್ಸಲ್ ನಿಗ್ರಹದಳದೊಂದಿಗೆ ಇಂದು ಮಧ್ಯಾಹ್ನ ಬಹುಹೊತ್ತಿನವರೆಗೆ ಕೋಂಬಿಂಗ್ ನಡೆಸಿತು. ಅಲ್ಲದೆ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡುವದರೊಂದಿಗೆ ನಿರಂತರ ಸಂಪರ್ಕವಿದ್ದು, ಮಾರ್ಗದರ್ಶನ ನೀಡುತ್ತಿದ್ದಾರೆ.

ಡಿ.ಜಿ.ಪಿ. ನಿರ್ದೇಶನ : ಮೂಲಗಳ ಪ್ರಕಾರ ನಕ್ಸಲರ ಚಟುವಟಿಕೆ ಬಗ್ಗೆ ಮಾಹಿತಿ ಪಡೆದಿರುವ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ನೀಲಮಣಿ ರಾಜು ಅವರು, ಜಿಲ್ಲೆಯ ಅಧಿಕಾರಿಗಳಿಂದ ಆಗಿಂದಾಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಿನ್ನೆ ರಾತ್ರಿ ಕಾಣಿಸಿಕೊಂಡಿರುವ ನಕ್ಸಲ್ ಪ್ರದೇಶದಲ್ಲಿ ತೀವ್ರ ಶೋಧ ನಡೆಸುವಂತೆ ಸೂಚಿಸಿದ್ದಾರೆ.

ಗಂಭೀರ ನಡೆ : ಜಿಲ್ಲಾ ಪೊಲೀಸ್ ಅಧೀಕ್ಷಕರ ಸಹಿತ ಸ್ಥಳದಲ್ಲಿ ಬೀಡು ಬಿಟ್ಟಿರುವ ನಕ್ಸಲ್ ನಿಗ್ರಹದಳ ಮತ್ತು ಪೊಲೀಸ್ ಸಿಬ್ಬಂದಿ ಯಾವದೇ ಮಾಹಿತಿ ನೀಡಲು ಬಯಸುತ್ತಿಲ್ಲ. ಮಾಧ್ಯಮಗಳ ಜತೆಯಲ್ಲೂ ಗಂಭೀರ ನಡೆಯೊಂದಿಗೆ ಕೇವಲ ನಕ್ಸಲರ ಬೆನ್ನೇರಿರುವಂತೆ ಗೋಚರಿಸಿತು.

ಮನೆ ಮಂದಿಯ ಹೇಳಿಕೆ : ನಿನ್ನೆ ರಾತ್ರಿ ಊಟ ಇತ್ಯಾದಿ ಮುಗಿಸಿ ತೆರಳಿರುವ ಮನೆ ಮಂದಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸ್ ಇಲಾಖೆ ಈಗಾಗಲೇ ಗುರುತಿಸಿಕೊಂಡಿರುವ ನಕ್ಸಲ್ ಮಂದಿಯ ಭಾವಚಿತ್ರಗಳನ್ನು ತೋರಿಸಿ, ನಿನ್ನೆ ಕಾಣಿಸಿಕೊಂಡಿರುವ ಅಪರಿಚಿತರಿಗೆ ತಾಳೆಯಾಗಲಿದೆಯೆ? ಎಂಬ ಕುರಿತು ಶಂಕಪ್ಪ ಕುಟುಂಬದಿಂದ ಮಾಹಿತಿ ಕಲೆ ಹಾಕಿರುವದಾಗಿ ಗೊತ್ತಾಗಿದೆ.

ನಕ್ಸಲರ ಹಿನ್ನೆಲೆ : ನಿನ್ನೆ ಕಾಣಿಸಿಕೊಂಡಿದ್ದ ಮೂವರ ಪೈಕಿ ಇಬ್ಬರು ಮಧ್ಯ ವಯಸ್ಸಿನವರಾಗಿದ್ದು, ಒಬ್ಬನಿಗೆ ಅಂದಾಜು 60 ವರ್ಷ ಇರಬಹುದೆಂದು ಊಹಿಸಲಾಗಿದೆ. ನಕ್ಸಲ್ ನಿಗ್ರಹದಳ ಮೂಲಗಳ ಪ್ರಕಾರ ವಿಕ್ರಂಗೌಡ ಹಾಗೂ ಆತನ ಇಬ್ಬರು ಸಹಚರರು ಶಂಕಪ್ಪ ಅವರ ಮನೆಗೆ ಬಂದಿರುವ ಗುಮಾನಿ ಹುಟ್ಟಿಕೊಂಡಿದೆ.

ತುಳುವಿನಲ್ಲಿ ಮಾತು : ಸಂಜೆಗತ್ತಲೆ ನಡುವೆ ಶಂಕಪ್ಪ ಅವರ ಮನೆ ಪ್ರವೇಶಿಸುತ್ತಲೇ ಇಬ್ಬರು ಸ್ಪಷ್ಟವಾಗಿ ತುಳುವಿನಲ್ಲೂ ಮತ್ತೊಬ್ಬ ಕನ್ನಡ ಮಾತನಾಡುತ್ತಿದ್ದುದ್ದಾಗಿ ಮನೆ ಮಂದಿಯ ಮಾಹಿತಿ ಕಲೆ ಹಾಕಿರುವ ತನಿಖಾ ತಂಡದಿಂದ ಸುಳಿವು ಲಭಿಸಿದೆ.

ಈ ಎಲ್ಲ ಮೂಲಗಳನ್ನು ಶೋಧಿಸುತ್ತಿರುವ ಕಾರ್ಯ ತಂಡ ಗುಡ್ಡಗದ್ದೆ ಸುತ್ತು ಮುತ್ತಲಿನ ಹತ್ತಾರು ಕಿ.ಮೀ. ದೂರದ ಕಾಡುಗಳಲ್ಲಿ ನಕ್ಸಲಿರಿಗಾಗಿ ಕಾರ್ಯಾಚಣೆಯಲ್ಲಿ ತೊಡಗಿರುವ ಮಾಹಿತಿ ಲಭಿಸಿತು. ಅಲ್ಲದೆ, ಮೊಕ್ಕಾಂ ಹೂಡಿರುವ ಅಧಿಕಾರಿಗಳ ಸಹಿತ ಸಿಬ್ಬಂದಿ ಮತ್ತು ನಕ್ಸಲ್ ನಿಗ್ರಹದಳಕ್ಕೆ ಊಟ ಪೂರೈಕೆ ಮಾಡಲಾಗಿತ್ತು.

18 ದಿನ ಬಳಿಕ ಪ್ರತ್ಯಕ್ಷ : ಕಳೆದ ಜನವರಿ 14ರಂದು ಇದೇ ಸುಬ್ರಹ್ಮಣ್ಯ ವ್ಯಾಪ್ತಿಯ ಶಿರಾಡಿಘಾಟ್ ಅಡ್ಡಹೊಳೆ ಎಂಬಲ್ಲಿನ ಮಿತ್ತಮಜಲು ಎಂಬಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂದು ಈ ಮೂಲಗಳಿಂದ ಗೊತ್ತಾಗಿದೆ. ಅಲ್ಲಿನ ನಿವಾಸಿ ಸುರೇಶ ಎಂಬವರ ಮನೆಗೆ ಧಾವಿಸಿ ಆಹಾರ ಪದಾರ್ಥ ಕೊಂಡೊಯ್ದಿದ್ದಾರೆ. ಈ ಎಲ್ಲ ದೃಷ್ಟಿಕೋನ ಅನುಸರಿಸಿ ಕಾರ್ಯಾಚರಣೆ ನಡೆಯುತ್ತಿದೆ. ಒಟ್ಟಿನಲ್ಲಿ ಇಂದು ದಿನವಿಡೀ ಮೂವರು ನಕ್ಸಲರ ಪತ್ತೆಗಾಗಿ ವ್ಯಾಪಕ ‘ಕೋಂಬಿಂಗ್’ ಮುಂದುವರಿದಿದೆ. ಆದರೆ ಇದುವರೆಗೆ ಯಾವದೇ ಸುಳಿವು ಲಭಿಸಿಲ್ಲ.