ಮಡಿಕೇರಿ, ಫೆ. 1: ಕೊಡಗಿನ ಗಡಿ ಕುಶಾಲನಗರದ ತನಕ ರೈಲ್ವೇ ಯೋಜನೆಯ ಪ್ರಸ್ತಾಪದ ಬೆನ್ನಲ್ಲೇ ನಗರದ ಸ್ಟೋನ್‍ಹಿಲ್ ಬಳಿ ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೈರುತ್ಯ ರೈಲ್ವೇ ಯೋಜನಾ ಕಚೇರಿ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಹಲವು ದಶಕಗಳ ಹಿಂದೆಯೂ ಇಲ್ಲಿ ದಕ್ಷಿಣ ಭಾರತದ ರೈಲ್ವೇ ಸೂಕ್ಷ್ಮ ತರಂಗ ನಿಯಂತ್ರಣ ಕಚೇರಿ ಕಾರ್ಯನಿರ್ವಹಿಸಲ್ಪಡುತ್ತಿತ್ತು.

ಈ ಹಳೆಯ ಕಚೇರಿಯ ಶಿಥಿಲಗೊಂಡಿರುವ ಕಟ್ಟಡಕ್ಕೆ ಹೊಂದಿಕೊಂಡಂತೆ ಇದೀಗ ನೂತನ ಕಟ್ಟಡದ ಕಾಮಗಾರಿಯು ಅಂದಾಜು ರೂ. 50 ರಿಂದ 60 ಲಕ್ಷ ವೆಚ್ಚದಲ್ಲಿ ನಡೆಯುತ್ತಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಸೂಕ್ಷ್ಮ ತರಂಗ ಗ್ರಹಿಕೆಯ ಗೋಪುರ (ಟವರ್) ರೂಪಿಸಲಾಗುವದು ಎಂದು ಬಲ್ಲಮೂಲಗಳಿಂದ ಮಾಹಿತಿ ಲಭಿಸಿದೆ.

ಜಾಗಕ್ಕೂ ತೊಡರುಗಾಲು: ದಶಕಗಳ ಹಿಂದೆಯೇ ಈ ಸ್ಥಳದಲ್ಲಿ ರೈಲ್ವೇ ಕಚೇರಿ ಕಾರ್ಯನಿರ್ವಹಿಸುವ ದರೊಂದಿಗೆ, ಆ ದಿನಗಳಲ್ಲಿ ನೈರುತ್ಯ ರೈಲ್ವೇ ಇಲಾಖೆಗೆ ಸಂಬಂಧಪಟ್ಟಂತೆ ಸುಮಾರು 3.8 ಎಕರೆ ಜಾಗವೂ ಕೂಡ ದಾಖಲೆಗಳಲ್ಲಿ ಇದ್ದುದಾಗಿ ತಿಳಿದು ಬಂದಿದೆ. ಹೀಗಾಗಿ ನೈರುತ್ಯ ರೈಲ್ವೇ ಇಲಾಖೆ ಅಧಿಕಾರಿಗಳು ಈ ಜಾಗದಲ್ಲಿ ನೂತನ ಕಟ್ಟಡ ಕಾಮಗಾರಿ ಆರಂಭಿಸಿ ದ್ದರು. ಅಷ್ಟರಲ್ಲಿ ಸಂಬಂಧಿಸಿದ ನಿವೇಶನ ಕುರಿತು ಕೆಲವರ ಅಪಸ್ವರ ದಿಂದಾಗಿ ಕೆಲಸ ಸ್ಥಗಿತಗೊಂಡಿತ್ತು.

ಹೀಗಾಗಿ ನೈರುತ್ಯ ರೈಲ್ವೇ ಇಲಾಖೆಯ ಮೇಲಧಿಕಾರಿಗಳು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ವ್ಯವಹರಿಸಿ, ಹಲವು ದಶಕಗಳ ಹಿಂದೆಯೇ ನೈರುತ್ಯ ರೈಲ್ವೇ ಇಲಾಖೆ ಅಧೀನವಿದ್ದ ಜಾಗದ ಕುರಿತು ಗಮನ ಸೆಳೆದಿದ್ದಾರೆ. ಜಾಗದ ಸರ್ವೆ ನಂ. 460/1 ಪಿ ಅಡಿಯಲ್ಲಿ ಇಲಾಖೆಯ ಸ್ವತ್ತು ಗುರುತಿಸಲ್ಪಟ್ಟಿತ್ತು.

ಅನಂತರದಲ್ಲಿ ಪರಿಶೀಲಿಸಲಾಗಿ ರಾಜ್ಯ ಸರಕಾರದಿಂದ ಈ ಜಾಗ ಯಾವ ಕಾರಣಕ್ಕಾಗಿ ಹಿಂಪಡೆಯ ಲಾಗಿದೆ ಎಂಬ ಅಂಶ ತಿಳಿಯದೇ ಹೋಗಿದ್ದು, ಗೊಂದಲಕ್ಕೆ ಕಾರಣವಾಗಿತ್ತು. ಪರಿಣಾಮ ಕಟ್ಟಡದ ಕಾಮಗಾರಿಯೂ ನೆನೆಗುದಿಗೆ ಬೀಳುವಂತಾಗಿತ್ತು. ಆ ಬೆನ್ನಲ್ಲೇ ಇಲಾಖೆ ಅಧಿಕಾರಿಗಳು ಮರಳಿ ಪ್ರಯತ್ನಿಸಿದ್ದು, ಪ್ರಸಕ್ತ ರಾಜ್ಯ ಸರಕಾರ ಕೇವಲ 1 ಎಕರೆ ಜಾಗವನ್ನು ಮಾತ್ರ ನೈರುತ್ಯ ರೈಲ್ವೇಗೆ ಕಲ್ಪಸಿದೆ.

ಈ ಜಾಗದಲ್ಲಿ ನೂತನವಾಗಿ ಕಟ್ಟಡ ಕಾಮಗಾರಿಯೊಂದಿಗೆ ಭವಿಷ್ಯದ ನೈರುತ್ಯ ರೈಲ್ವೇ ನಿರ್ವಹಣಾ ಕೇಂದ್ರದ ಮಡಿಕೇರಿ ಘಟಕ ತಲೆಯೆತ್ತುತ್ತಿದೆ. ಹೀಗಾಗಿ ಮೈಸೂರು-ಮಂಗಳೂರು ಸುತ್ತಮುತ್ತಲಿನ ರೈಲ್ವೇ ಸಂಚಾರ ಸಂಬಂಧ ಈ ನೈರುತ್ಯ ವಲಯ ಕಚೇರಿ ಕಾರ್ಯನಿರ್ವಹಿಸಲಿದೆ.

ಅಲ್ಲದೆ ಅನೇಕ ವರ್ಷಗಳ ಆಶಯದಂತೆ ಭವಿಷ್ಯದಲ್ಲಿ ಕೊಡಗಿನ ಗಡಿ ಕುಶಾಲನಗರ ತನಕ ರೈಲ್ವೇ ಸಂಪರ್ಕ ಜಾರಿಗೊಂಡರೆ ನೈರುತ್ಯ ವಲಯದ ಈ ಕಚೇರಿಗೆ ಇನ್ನಷ್ಟು ಮಹತ್ವ ಲಭಿಸಬಹುದು. ಒಟ್ಟಿನಲ್ಲಿ ಹಲವು ದಶಕಗಳ ಹಿಂದೆಯೇ ಮಡಿಕೇರಿಯಲ್ಲಿದ್ದ ರೈಲ್ವೇ ಕಚೇರಿಯೊಂದು ಮರು ಅಸ್ತಿತ್ವ ಹೊಂದುತ್ತಿದೆ.