ಶನಿವಾರಸಂತೆ, ಫೆ. 1: ಪುಟ್ಟ ಪಟ್ಟಣ ಶನಿವಾರಸಂತೆಯಲ್ಲಿ ಜನಿಸಿ ವಿಶ್ವ ಭೂಪಟದಲ್ಲಿ ಈ ಪಟ್ಟಣವನ್ನು ಗುರುತಿಸುವಂತೆ ಮಾಡಿದ ಭಾರತದ ಪ್ರಪ್ರಥಮ ದಂಡನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ನಿತ್ಯ ಸ್ಮರಣೀಯ ಎಂದು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಂ.ಎನ್. ಧರ್ಮಪ್ಪ ಅಭಿಪ್ರಾಯಪಟ್ಟರು.

ಸ್ಥಳೀಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಗ್ರಂಥಾಲಯದಲ್ಲಿ ಜನರಲ್ ಕಾರ್ಯಪ್ಪ ಸಮಿತಿ ವತಿಯಿಂದ ನಡೆದ ಕಾರ್ಯಪ್ಪ ಅವರ ಜನ್ಮದಿನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಿವೃತ್ತ ಸೈನಿಕ ಕೆ.ವಿ. ಮಂಜುನಾಥ್ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನಿಸಿದ ಮನೆಯಲ್ಲೇ ಅವರ ಜನ್ಮ ದಿನವನ್ನು ಆಚರಿಸುತ್ತಿರುವದು ಅರ್ಥಪೂರ್ಣವೆನಿಸಿದೆ. ರಕ್ಷಣಾ ಪಡೆಯಲ್ಲಿ ರಾಜಕೀಯ ನುಸಳದಂತೆ ಕರ್ತವ್ಯ ನಿರ್ವಹಿಸಿದ ಶಿಸ್ತಿನ ಸಿಪಾಯಿ ಕಾರ್ಯಪ್ಪ ಯುವ ಜನಾಂಗಕ್ಕೆ ಆದರ್ಶಪ್ರಾಯರು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಬಿ.ಕೆ. ಚಂದ್ರಶೇಖರ್ ಮಾತನಾಡಿ, ಜನರಲ್ ಕಾರ್ಯಪ್ಪ ಅವರು ಜನಿಸಿದ ಸ್ವಗ್ರಾಮದ ಮನೆಯಲ್ಲಿ ಅವರ ಜನ್ಮದಿನ ಆಚರಿಸುತ್ತಿರುವದು ಇತಿಹಾಸದಲ್ಲೇ ಒಂದು ಅಜರಾಮರ ದಾಖಲೆ ಎಂದರು.

ಸಮಿತಿ ಉಪಾಧ್ಯಕ್ಷ ಆರ್.ಕೆ. ನಾರಾಯಣ್, ಕಾರ್ಯದರ್ಶಿ ಬಿ.ಎಸ್. ಗಣೇಶ್, ನಿವೃತ್ತ ಸೈನಿಕ ಎಸ್.ಎನ್. ಪಾಂಡು, ಪ್ರಮುಖರಾದ ಸಿ.ಎನ್. ಗಿರೀಶ್, ಪ್ರಕಾಶ್‍ಚಂದ್ರ, ಚಂದ್ರೇಗೌಡ, ಮಹೇಶ್, ಮಂಜು, ಪರಮೇಶ್, ಎಂ.ಕೆ. ಗಿರೀಶ್ ಪ್ರಕಾಶ್, ವಿಜಯಕುಮಾರ್, ಮಧ್ಯಪೇಟೆ ವಿಘ್ನೇಶ್ವರ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.