ಶ್ರೀಮಂಗಲ, ಜ. 30: ಕೊಡಗು ಜಿಲ್ಲೆಯ ಮೂಲಕ ಯಾವದೇ ರೈಲ್ವೆ ಯೋಜನೆ ರೂಪಿಸುವದನ್ನು ವಿರೋಧಿಸಿ ನಡೆಯುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ ಪಾಲ್ಗೊಳ್ಳಲು ಬಿರುನಾಣಿ ಕೊಡವ ಸಮಾಜದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕೊಡಗು ರೈಲ್ವೇ ವಿರೋಧಿ ಹೋರಾಟ ವೇದಿಕೆಯಿಂದ ನಡೆದ ಜನಜಾಗೃತಿ ಸಭೆಯು ಬಿರುನಾಣಿಯ ಮರೆನಾಡು ಕೊಡವ ಸಮಾಜದ ಅಧ್ಯಕ್ಷ ಮಲ್ಲೇಂಗಡ ಪೆಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಜಿಲ್ಲೆಯ ಮೂಲಕ ರೂಪಿಸುತ್ತಿರುವ ಹಲವು ರೈಲ್ವೇ ಮಾರ್ಗ ಯೋಜನೆಯನ್ನು ವಿರೋಧಿಸಿ ಫೆ. 18ರಂದು ಮೈಸೂರಿನಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನಾ ರ್ಯಾಲಿಗೆ ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಲಾಯಿತು.
ಕುಶಾಲನಗರದ ಕೊಪ್ಪವರೆಗೆ ಬರುವ ರೈಲು ಮಾರ್ಗಕ್ಕೆ ವಿರೋಧ ಮಾಡದಂತೆ ತೀರ್ಮಾನ ಕೈಗೊಳ್ಳಲಾಯಿತು. ಆದರೆ, ಕುಶಾಲನಗರದಿಂದ ಈ ಮಾರ್ಗ ಜಿಲ್ಲೆಯ ಒಳಗೆ ಮುಂದುವರೆಸಲು ಅವಕಾಶ ನೀಡದಂತೆ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಕೊಡಗು ರೈಲ್ವೇ ವಿರೋಧಿ ಹೋರಾಟ ವೇದಿಕೆಯ ಪ್ರಮುಖರಾದ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಮಾಚಿಮಾಡ ಎಂ.ರವೀಂದ್ರ, ಮಲ್ಲಮಾಡ ಪ್ರಭು ಪೂಣಚ್ಚ, ಬಿರುನಾಣಿ ಕೊಡವ ಸಮಾಜದ ಪದಾಧಿಕಾರಿಗಳಾದ ಬೊಳ್ಳೆರ ಅಪ್ಪುಟ ಪೊನ್ನಪ್ಪ, ಅಣ್ಣಳಮಾಡ ಲಾಲ ಅಪ್ಪಣ್ಣ, ಕರ್ತಮಾಡ ಮಿಲನ್ ಮಾದಪ್ಪ, ಮಲ್ಲೇಂಗಡ ಧನುಂಜಯ, ಬಿರುನಾಣಿ ಗ್ರಾ.ಪಂ ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ, ಸದಸ್ಯ ಕಾಯಪಂಡ ಸುನಿಲ್, ಕುಪ್ಪಣಮಾಡ ಬೇಬಿ ನಂಜಮ್ಮ, ಹಿರಿಯರಾದ ಮುಳ್ಳೇಂಗಡ ಮಣಿ, ಬೊಟ್ಟಂಗಡ ಮಾಚಯ್ಯ, ಮತ್ತಿತರರು ಹಾಜರಿದ್ದರು.