ಗೋಣಿಕೊಪ್ಪ ವರದಿ, ಜ. 31 : ಕಾಫಿ ಮಂಡಳಿ ವತಿಯಿಂದ ಕಾಫಿ ಬೆಳೆಗೆ ಬೆಲೆ ನಿಗದಿಪಡಿಸುವ ಅಧಿಕಾರವಿಲ್ಲ ಮತ್ತು ರೈತ ಗುಂಪುಗಳಾಗಿ ಮಾಡಿಕೊಂಡರೆ ವಿವಿಧ ಸೌಲಭ್ಯಗಳನ್ನು ನೀಡಲು ಸುಲಭವಾಗುತ್ತದೆ ಎಂದು ಕಾಫಿ ಮಂಡಳಿ ಸಂಶೋಧನಾ ನಿರ್ದೇಶಕ ಡಾ.ರಘುರಾಮಲು ಹೇಳಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಕಾಫಿ ಮಂಡಳಿ ವತಿಯಿಂದ ನಡೆದ ಕಾಫಿ ಬೆಳೆಗಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ಮಂಡಳಿಯ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳಿಗೆ ಮಾತ್ರ ಸೌಲಭ್ಯಗಳನ್ನು ನೀಡಲು ಸಾಧ್ಯ ಎಂದು ಹೇಳಿದರು.
ಪೊನ್ನಂಪೇಟೆ ಅರಣ್ಯ ಮಹಾವಿಶ್ವವಿದ್ಯಾಲಯದ ಡೀನ್ ಡಾ. ಕುಶಾಲಪ್ಪ ತೇವಾಂಶ ಹಾಗೂ ಔಟರ್ನ್ ಕಂಡುಹಿಡಿಯುವ ಸೌಲಭ್ಯವನ್ನು ಜಿಲ್ಲಾದ್ಯಂತ ವಿಸ್ತರಿಸಿದರೆ, ಸಣ್ಣ ಹಾಗೂ ಮಧ್ಯಮ ರೈತರು ವ್ಯಾಪಾರಸ್ಥರಿಂದ ಮೋಸ ಹೋಗುವದನ್ನು ತಡೆಯಬಹುದು ಎಂದು ಸಲಹೆ ನೀಡಿದರು.
ಕಾಫಿ ಬೆಳೆಯನ್ನು ಕೃಷಿಯಾಗಿ ಕೈಗೊಳ್ಳಬಾರದು ಅದನ್ನು ವ್ಯಾಪಾರವಾಗಿ ಮಾರ್ಪಡಿಸಬೇಕಾದ ಸಮಯ ಬಂದಿದೆ. ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಾದರೆ ಕಾಫಿ ಉದ್ಯಮವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸಬೇಕಿದೆ ಎಂದು ಹೇಳಿದರು.
ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್ ಮಾತನಾಡಿ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ ಅದರಲ್ಲಿ 50,000 ಹೆಕ್ಟೇರ್‍ನಷ್ಟು ಪ್ರದೇಶದಲ್ಲಿ ಸಣ್ಣ ಬೆಳೆಗಾರರು ಕಾಫಿ ಬೆಳೆಯನ್ನು ಜೀವನೋಪಾಯಕ್ಕೆ ಅವಲಂಬಿಸಿ ದ್ದಾರೆ. ಬೆಲೆ ಕುಸಿತದಿಂದ ಸಣ್ಣ ಬೆಳೆಗಾರರಿಗೆ ಆರ್ಥಿಕ ಮುಗ್ಗಟ್ಟು ಉಂಟಾಗಿದೆ ಎಂದು ಹೇಳಿದರು.
ಕಾಫಿ ಮಂಡಳಿ ಸದಸ್ಯ ಡಾಲಿ ಚಂಗಪ್ಪ ಮಾತನಾಡಿ ಮಂಡಳಿಯಲ್ಲಿ ಅಧಿಕಾರಿ ವರ್ಗ ಸದಸ್ಯರ ಸಲಹೆ ಗಳನ್ನು ಗಣನೆಗೆ ತಗೆದುಕೊಳ್ಳುತ್ತಿಲ್ಲ. ಅಧಿಕಾರಿ ವರ್ಗ ಬೆಳೆಗಾರರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸಂಶೋಧನೆಯ ಪ್ರಯೋಜನ ಗಳು ಬೆಳೆಗಾರರಿಗೆ ತಲುಪುತ್ತಿಲ್ಲ. ಕಾಫಿ ಬೆಲೆಯನ್ನು ನಿಗದಿಪಡಿಸಲು ಬೆಳೆಗಾರರಿಗೆ ಅಧಿಕಾರವಿಲ್ಲ ಸರ್ಕಾರವನ್ನು ಅವಲಂಬಿಸಬೇಕಿದೆ. ಬೆಳೆಗಾರನ ಆರ್ಥಿಕ ಪರಿಸ್ಥಿತಿ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿಲ್ಲ ಎಂದರು.
ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬುಲಿರ ಹರೀಶ್ ಮಾತನಾಡಿ ಶೇ.98 ಸಣ್ಣ ಬೆಳೆಗಾರರನ್ನು ಹೊಂದಿರುವ ಕಾರಣ ಸಣ್ಣ ಬೆಳೆಗಾರರಿ ಸಂಕಷ್ಟ ಎದುರಿಸುತ್ತಿದ್ದಾರೆ. ಕಾಫಿಗೆ ಬೆಂಬಲ ಬೆಲೆ ನಿಗದಿಪಡಿಸಲು ಮಂಡಳಿಯಿಂದ ಸಹಕಾರ ಸಿಗುತ್ತಿಲ್ಲ ಎಂದು ಹೇಳಿದರು.
ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ ಮಾತನಾಡಿ ಬಹುತೇಕ ಸಣ್ಣ ಬೆಳೆಗಾರ ರನ್ನು ಹೊಂದಿರುವ ಉದ್ಯಮಕ್ಕೆ ಸರ್ಕಾರ ವಿಶೇಷ ಕಾಳಜಿ ವಹಿಸಿ. ಸಣ್ಣ ಬೆಳೆಗಾರರ ಮೂಲಭೂತ ಸೌಕರ್ಯ ಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ಕ್ರಮಗಳನ್ನು ರೂಪಿಸಿದರೆ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಬಹುದು ಎಂದರು.
ಬೆಳೆಗಾರರ ಒಕ್ಕೂಟದ ತಾಂತ್ರಿಕ ಸಲಹೆಗಾರ ಶರೀ ಮಾತನಾಡಿ ಬೆಲೆ ನಿಗದಿಯಲ್ಲಿ ವ್ಯಾಪಾರಸ್ಥರು ಮೇಲುಗೈ ಸಾಧಿಸಿದ್ದಾರೆ. ಬೇಳೆಗಾರನಿಗೆ ಯಾವದೇ ಪ್ರಯೋಜನವಾಗುತ್ತಿಲ್ಲ. ಬೆಳೆಗಾರನ ವ್ಯಾಪ್ತಿಯಿಂದ ಬೆಳೆ ಹೊರಹೋದ ನಂತರ ಎಲ್ಲರಿಗೂ ಲಾಭವಾಗುತ್ತಿದೆ. ರೈತ, ಬೆಳೆಗಾರ ಮಾತ್ರ ಸಂಕಷ್ಟದಲ್ಲಿದ್ದಾನೆ. ಸ್ವಾಮಿನಾಥನ್ ವರದಿ ಜಾರಿ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಬೆಳೆಗಾರನಿಗೆ 20 ವರ್ಷ ಹಿಂದಿನ ಬೆಲೆ ಮಾತ್ರ ಲಭ್ಯವಾಗುತ್ತಿದೆ. ಉತ್ಪಾದನಾ ವೆಚ್ಚ ಶೇ.250 ಹೆಚ್ಚಾಗಿದೆ ಎಂದು ಹೇಳಿದರು.
ಮಂಡಳಿ ಸದಸ್ಯ ಬೊಟ್ಟಂಗಡ ರಾಜು, ಕಾಫಿ ಮಂಡಳಿ ಪ್ರಬಾರ ಹಿರಿಯ ಸಂಪರ್ಕ ಅಧಿಕಾರಿ ಎಸ್. ಬಿ. ರಮೇಶ್ ಹಾಗೂ ಕಾಫಿ ಬೆಳೆಗಾರರು ಸಭೆಯಲ್ಲಿ ಭಾಗವಹಿಸಿದ್ದರು.