ಸೋಮವಾರಪೇಟೆ, ಜ. 30: ಮೊಗೇರ ಕ್ಷೇಮಾಭಿವೃದ್ಧಿ ಯುವಕ ಸಂಘದ ವತಿಯಿಂದ ತೋಳೂರು ಶೆಟ್ಟಳ್ಳಿ ಸಮೀಪದ ಇನಕನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಕೂತಿ ಸೋಮೇಶ್ವರ ಯುವಕ ಸಂಘ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನ ಪಡೆಯಿತು.ತೋಳೂರುಶೆಟ್ಟಳ್ಳಿಯ ಎಸ್.ಕೆ. ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮೊಗೇರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಬಡ್ಡಿ ಮಾತ್ರವಲ್ಲದೇ ಸಾರ್ವ ಜನಿಕರಿಗೆ ಇತರ ಕ್ರೀಡಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು.

ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಕಬಡ್ಡಿ, ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವದು, ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಮಕ್ಕಳಿಗೆ ಗುಡ್ಡಗಾಡು ಓಟ ಸೇರಿದಂತೆ ಇನ್ನಿತರ ಕ್ರೀಡಾಸ್ಪರ್ಧೆ ನಡೆದವು.

ಉದ್ಯಮಿ ಹರಪಳ್ಳಿ ರವೀಂದ್ರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ನಡೆಯುವ ಕ್ರೀಡಾ ಕೂಟಗಳಿಂದ ಪರಸ್ಪರ ಬಾಂಧವ್ಯ ವೃದ್ಧಿಸುತ್ತದೆ. ಸಂಘ-ಸಂಸ್ಥೆಗಳು ಸಮಾಜ ಸೇವೆಯೊಂದಿಗೆ ಕ್ರೀಡೆಗಳಿಗೂ ಮಹತ್ವ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ವಿಕಲಚೇತನರ ಹ್ಯಾಂಡ್‍ಬಾಲ್ ಆಟಗಾರ್ತಿ ದೀಪಿಕಾ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಜಿ ಸೈನಿ ಕರು, ಸರ್ಕಾರಿ ಅಧಿಕಾರಿಗಳು, ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ವೇದಿಕೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್, ಉದ್ಯಮಿ ಗಿರೀಶ್ ಮಲ್ಲಪ್ಪ, ಮೊಗೇರ ಸಂಘದ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಶಿವಪ್ಪ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.