ಗೋಣಿಕೊಪ್ಪ ವರದಿ, ಜ. 30: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಜನ್ಮದಿನಾಚರಣೆ ಅಂಗವಾಗಿ ಗೋಣಿಕೊಪ್ಪಲು-ವೀರಾಜಪೇಟೆ ಸ್ವಚ್ಛತಾ ಆಂದೋಲನಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಎನ್‍ಎಸ್‍ಎಸ್ ಘಟಕದ ಸಂಯೋಜನಾಧಿಕಾರಿ ಪ್ರೊ. ವಿನಿತಾ ರೈ ಚಾಲನೆ ನೀಡಿದರು.ಕಾವೇರಿ ಕಾಲೇಜು, ಎನ್‍ಎಸ್‍ಎಸ್, ಎನ್‍ಸಿಸಿ, ರೋವರ್ಸ್ ಮತ್ತು ರೇಂಜರ್ಸ್, ಇಸಿಎ, ಸ್ಪೋಟ್ರ್ಸ್ ವಿಭಾಗಗಳ ಸಹಯೋಗದಲ್ಲಿ ಇಲ್ಲಿನ ಉಮಾಮಹೇಶ್ವರಿ ದೇವಸ್ಥಾನ ಆವರಣದಲ್ಲಿ ನಡೆದ ಗೋಣಿಕೊಪ್ಪ ಉಮಾಮಹೇಶ್ವರಿ ದೇವಸ್ಥಾನದಿಂದ ವೀರಾಜಪೇಟೆವರೆಗಿನ 16 ಕಿ.ಮೀ. ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸ್ವಚ್ಛತಾ ಸಂದೇಶ ಪ್ರತಿಜ್ಞಾ ಘೋಷಣೆ ಮಾಡುವ ಮೂಲಕ ಚಾಲನೆ ನೀಡಿದರು. ಕಾವೇರಿ ಪದವಿ ಕಾಲೇಜುವಿನ ಎನ್‍ಎಸ್‍ಎಸ್, ಎನ್‍ಸಿಸಿ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಪದಾಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಗೋಣಿಕೊಪ್ಪ ಗ್ರಾ.ಪಂ. ಪಿಡಿಓ ಚಂದ್ರಮೌಳಿ, ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಹಾಗೂ ಎನ್‍ಎಸ್‍ಎಸ್ ಯೋಜನಾಧಿಕಾರಿ ವನಿತ್ ಕುಮಾರ್, ಬ್ರೈಟಕುಮಾರ್, ಬೀನಾ ಇದ್ದರು. ಸುಮಾರು 500 ಕ್ಕೂ ಹೆಚ್ಚು ಸೇವಕರು ಅಭಿಯಾನದಲ್ಲಿ ಪಾಲ್ಗೊಂಡು ಸ್ವಚ್ಛತೆ ಮಾಡಿದರು.