ಸೋಮವಾರಪೇಟೆ,ಜ.31: ಅಂದಿನ ಕಾಲದಲ್ಲಿಯೇ ನಾಟಕ ಹಾಗೂ ಬರಹಗಳ ಮೂಲಕ ವಿಚಾರಗಳನ್ನು ನಾಡಿನ ಜನತೆಗೆ ಪರಿಚಯಿಸಿದ ಹರದಾಸ ಅಪ್ಪಚ್ಚ ಕವಿ ವಿಶ್ವಕ್ಕೆ ಮಾದರಿಯಾಗಿದ್ದು, ಭಾರತ ರತ್ನ ಗೌರವಕ್ಕೂ ಅರ್ಹರಾಗಿದ್ದಾರೆ. ಈ ಬಗ್ಗೆ ಸರ್ಕಾರಗಳು ಚಿಂತಿಸಬೇಕು ಎಂದು ಹಿರಿಯ ಸಾಹಿತಿ, ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಹೇಳಿದರು.ಇಲ್ಲಿನ ಕೊಡವ ಸಮಾಜ ಮತ್ತು ಅಖಿಲ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಹರದಾಸ ಅಪ್ಪಚ್ಚ ಕವಿಯ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮ ದೇಶ ಹಿಂದೂ ಸಂಸ್ಕøತಿಯ ನೆರಳಿನಲ್ಲಿ, ಕರ್ನಾಟಕವು ಕನ್ನಡ ಸಂಸ್ಕøತಿಯ ನೆರಳಿನಲ್ಲಿ ಇರುವ ಹಾಗೆ, ಕೊಡಗು ಕೊಡವಾಮೆಯ ನೆರಳಿನಲ್ಲಿ ಇರಬೇಕು. ಜಾತಿ ಮತ್ತು ಧರ್ಮಗಳಿಗೆ ಸೀಮಿತವಾಗಿ ನೋಡುವಂತಹ ಮನೋಭಾವನೆ ತೊಲಗಬೇಕು ಎಂದು ಹೇಳಿದರು.
ಅಪ್ಪಚ್ಚ ಕವಿಯ ಜನ್ಮ ದಿನವಾದ ಸೆಪ್ಟಂಬರ್ 21 ಅನ್ನು ಸರಕಾರಿ ವತಿಯಿಂದಲೇ ಆಚರಣೆ ಮಾಡಬೇಕು. ಕನಿಷ್ಠ ಕೊಡಗು ಜಿಲ್ಲೆಯಲ್ಲಾದರೂ ಜಿಲ್ಲಾಡಳಿತದ ವತಿಯಿಂದ ಆಚರಿಸಬೇಕು. ಕವಿಯ ಹೆಸರನ್ನು ನಾಪೋಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮಡಿಕೇರಿಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಇಡಬೇಕು. ಮಂಗಳೂರು ಅಥವಾ ಮೈಸೂರು ವಿಶ್ವ ವಿದ್ಯಾನಿಲಯಗಳಲ್ಲಿ ಕವಿಯ ಹೆಸರಿನಲ್ಲಿ ಅಧ್ಯಯನ ಪೀಠ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಈಗಾಗಲೇ ಕೊಡವ ಸಂಸ್ಕøತಿ, ಆಚಾರ ವಿಚಾರಗಳನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪರಿಚಯಿಸಿ ಕೊಂಡು ಬಂದಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯರವರಂತೆ ಅಪ್ಪಚ್ಚ ಕವಿಯನ್ನು ಸಾಹಿತ್ಯ ಲೋಕದಲ್ಲಿ ಇವರೊಂದಿಗೆ ಸಮಕಾಲೀನರಾಗಿ ಗುರುತಿಸಬೇಕಿದೆ. ಇಂತಹ ವ್ಯಕ್ತಿಗಳ ಜನ್ಮ ದಿನಾಚರಣೆ ಯನ್ನು ಆಚರಿಸುವದು ನಮ್ಮ ಕರ್ತವ್ಯ. ಕವಿಯ ಬದುಕು ಮತ್ತು ನಾಟಕಗಳನ್ನು ಇಂದಿನ ಯುವ ಜನಾಂಗ ಓದಿ ತಿಳಿದುಕೊಳ್ಳಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮಾತನಾಡಿ, ಕವಿಯ ಬಗ್ಗೆ ಅರಿವು ಮೂಡಿಸುವದರೊಂದಿಗೆ ಜನೋತ್ಸವ ಕಾರ್ಯಕ್ರಮ ನಡೆಸುತ್ತಿದ್ದೇವೆ. ಕೊಡವ ಜನಪದ ಕಲೆ, ನಾಟಕ, ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರ. ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಕವಿಗೆ ಸಂಬಂಧಿಸಿದ ಬದುಕು ಮತ್ತು ಬರಹಗಳ ಕುರಿತು ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಲಿದ್ದೇವೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಮಾತನಾಡಿ, ಅಪ್ಪಚ್ಚ ಕವಿ ನಾಟಕ, ವಿಚಾರಧಾರೆ, ಜೀವನ, ಕಲೆ, ಸಾಹಿತ್ಯ ಸೃಷ್ಟಿಸುವ ಸಂದರ್ಭ ಕವಿಯು ತನ್ನ ಬದುಕಿನಲ್ಲಿ ಬಂದ ಕಷ್ಟವನ್ನು ಎದುರಿಸಿದ ರೀತಿ, ತೋರಿದ ದೈರ್ಯ ಅನುಕರಣೀಯ ಎಂದರು.
ವೇದಿಕೆಯಲ್ಲಿ ಸಾಹಿತಿ ಕಲ್ಲೇಂಗಡ ಅಪ್ಪಚ್ಚು, ಸಂಸ್ಕøತಿ ಚಿಂತಕಿ ಮಣವಟ್ಟೀರ ಶಾರದ ಮಂದಣ್ಣ, ಕೊಡವ ಸಮಾಜದ ಉಪಾಧ್ಯಕ್ಷ ಬಾಚಿನಾಡಂಡ ಪೂಣಚ್ಚ, ಮಹಿಳಾ ಘಟಕದ ಅಧ್ಯಕ್ಷೆ ಬಾಚಿನಾಡಂಡ ರೀಟಾ ಕುಶಾಲಪ್ಪ ಉಪಸ್ಥಿತರಿದ್ದರು. ಅಪ್ಪಚ್ಚ ಕವಿ ರಚಿತ ಹಾಡುಗಳನ್ನು ಮದ್ರೀರ ಸಂಜು, ಆಂಗೀರ ಕುಸುಮಾ ಮಾದಪ್ಪ, ವಿ.ಟಿ. ಶ್ರೀನಿವಾಸ್, ತಬಲ ಚಂದ್ರು ಅವರುಗಳು ಹಾಡುವ ಮೂಲಕ ಗಮನ ಸೆಳೆದರು. ತೇಲಪಂಡ ಕವನ್ ಕಾರ್ಯಪ್ಪ ಕಾರ್ಯಕ್ರಮ ನಿರ್ವಹಿಸಿದರು.