ಸೋಮವಾರಪೇಟೆ, ಜ. 31: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರುಗಳಾದ ಬಿ.ಪಿ. ಅರವಿಂದ ಬಾಬು, ಥೋಮಸ್ ವಾಸ್, ಶಿಕ್ಷಣ ಕ್ಷೇತ್ರದಿಂದ ಪೃಥ್ವಿ, ಪತ್ರಿಕೋದ್ಯಮ ಕ್ಷೇತ್ರದಿಂದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕನ್ನಡ ಸೇವೆಗಾಗಿ ಬಿ.ಎಸ್. ಲೋಕೇಶ್ ಸಾಗರ್, ಸಮಾಜ ಸೇವೆಗಾಗಿ ಜೀಪ್ ಮಂಜುನಾಥ್ ಅವರುಗಳನ್ನು ಕಸಾಪದಿಂದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಇದರೊಂದಿಗೆ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸಿಂಚನ, ವಿವಿಧ ಗೋಷ್ಠಿಗಳಿಗೆ ಆಯ್ಕೆಯಾಗಿರುವ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರುತ್ತಿರುವ ತಾಲೂಕಿನ ವಿದ್ಯಾರ್ಥಿಗಳಾದ ಮೌಸೀನಾ, ರಕ್ಷಿತ್ ಪಿ.ಜಿ., ಎ.ಆರ್. ವಿಕಾಸ್, ಶ್ರಾವಣಿ, ಶೈಮಾ, ದಿಶಾಂಕ್, ಸಿ.ಪಿ. ಶ್ರೀಲಕ್ಷ್ಮೀ, ತಾನ್ಯ, ತರುಣ್, ಪ್ರಣವ್, ಅಮೂಲ್ಯ, ಸುಧನ್ವ, ಸಾಧನಾ, ತನ್ವಿತಾ ಶೆಟ್ಟಿ, ದಶಮಿ, ಶಿಂಷಾ, ನಿಮಿಷ, ರಿಷಾ ಅವರುಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಏರ್ಪಡಿಸಿದ್ದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹೇಮಂತ್ ಗೌಡಳ್ಳಿ, ದ್ವಿತೀಯ ಸ್ಥಾನ ಪಡೆದ ಅನ್ವಿತಾ ಶೆಟ್ಟಿ, ತೃತೀಯ ಬಹುಮಾನ ಪಡೆದ ನಳಿನಿ ಗಣೇಶ್, ರಂಗೋಲಿ ಸ್ಪರ್ಧೆಯಲ್ಲಿ ಕ್ರಮವಾಗಿ ಅನ್ವಿತಾ ಶೆಟ್ಟಿ, ನೇಹಾ, ಶೋಭ, ದಶಮಿ ಅವರುಗಳಿಗೆ ಬಹುಮಾನ ವಿತರಿಸಲಾಯಿತು.

ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್‍ಪಿ ಕೆ.ಇ. ಮುರುಳೀಧರ್ ಸಮಾರಂಭವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ವಲಯ ಅರಣ್ಯಾಧಿಕಾರಿ ಎನ್. ಲಕ್ಷ್ಮೀಕಾಂತ್, ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ಎಸ್.ಎ. ಮುರಳೀಧರ್, ಪ.ಪಂ. ಮಾಜಿ ಅಧ್ಯಕ್ಷೆ ಸುಮಾ ಸುದೀಪ್ ಸೇರಿದಂತೆ ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು.