(ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಜ.31: ಕಳೆದೆರಡು ದಿನಗಳ ಹಿಂದೆ ತಿತಿಮತಿ ಪಂಚಾಯ್ತಿ ವ್ಯಾಪ್ತಿಯ ದೊಡ್ಡರೇಷ್ಮೆ ಹಾಡಿಯ 70ರ ಪ್ರಾಯದ ಕೆಂಚ ಎಂಬಾತ ತನ್ನ ಕೂಲಿ ಕೆಲಸ ಮುಗಿಸಿ ಮಾಲೀಕರೊಂದಿಗೆ ಆ ದಿನದ ಕೂಲಿಯನ್ನು ಪಡೆದುಕೊಂಡು ಬರುತ್ತಿದ್ದ ಸಂದರ್ಭ ಕಾಡಾನೆಯೊಂದು ಈತನ ಮೇಲೆ ಧಾಳಿ ನಡೆಸಿದೆ. ಕೆಂಚನ ಬಲಗೈ ಮುರಿದಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದ ಅರಣ್ಯ ಇಲಾಖೆಯ ತಿತಿಮತಿ ವಿಭಾಗದ ಎಸಿಎಫ್ ಶ್ರೀಪತಿ, ವಲಯ ಅರಣ್ಯಾಧಿಕಾರಿ ಅಶೋಕ್ ಭೇಟಿ ನೀಡಿ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಮಿಕ ಕೆಂಚನ ಸಂಕಷ್ಟಕ್ಕೆ ಸಹಕರಿಸಬೇಕಾದ ಅರಣ್ಯಾಧಿಕಾರಿ ಗಳು ಕೇವಲ ಒಂದು ಸಾವಿರ ಹಣವನ್ನು ಕೆಂಚನ ಸಂಬಂಧಿಕನ ಕೈಗೆ ನೀಡಿ ಅಲ್ಲಿಂದ ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಂಚನ ಬಳಿಗೆ ಇನ್ನೂ ಕೂಡ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿಲ್ಲ. ಚಿಕಿತ್ಸೆ, ಊಟ ತಿಂಡಿಗೆ ಹಣವಿಲ್ಲದೆ ಕಾರ್ಮಿಕ ಕೆಂಚ ಕಂಗಲಾಗಿದ್ದಾನೆ.
ಮಾಧ್ಯಮದಲ್ಲಿ ಬಂದ ಸುದ್ದಿ ತಿಳಿಯುತ್ತಿದ್ದಂತೆ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯನವರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ತೆರಳಿ ಕಾಡಾನೆ ದಾಳಿಗೆ ತುತ್ತಾಗಿರುವ ಕೆಂಚನ ಆರೋಗ್ಯ ವಿಚಾರಿಸುವ ದರೊಂದಿಗೆ ಆತನ ಸಂಕಷ್ಟದಲ್ಲಿ ಭಾಗಿಯಾಗುವ ಮೂಲಕ ಮಾನವೀಯತೆ ಮೆರೆದರು.
ಈ ಸಂದರ್ಭ ಸಂಕೇತ್ ಪೂವಯ್ಯ ವೈಯಕ್ತಿಕವಾಗಿ ಹತ್ತು ಸಾವಿರ ಹಣವನ್ನು ಕೆಂಚನ ಚಿಕಿತ್ಸೆಗಾಗಿ ನೀಡಿದರು. ಅಧಿಕಾರಿಗಳ ಮೇಲೆ ಅಸಮಾಧಾನಗೊಂಡರು.