ಕುಶಾಲನಗರ, ಜ 31: ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂದುವದಿಲ್ಲ ಎಂದು ತೀರ್ಥಹಳ್ಳಿಯ ಬಾಲ ಸಾಹಿತಿ ಕು. ಅಂತಕರಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಿ ಪ್ರೋತ್ಸಾಹ ನೀಡುವಲ್ಲಿ ಪೋಷಕರು ಮುಂದಾಗಬೇಕು. ಮಕ್ಕಳಲ್ಲಿ ಓದು ನಿರಂತರವಾಗಿರಬೇಕು. ಓದುವ ಮೂಲಕ ಬರವಣಿಗೆ ಸಾಹಿತ್ಯ ರೂಪ ಪಡೆಯುತ್ತದೆ ಎಂದರು.
ಪೋಷಕರು ಮಕ್ಕಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳಾದ ಮೊಬೈಲ್, ಟ್ಯಾಬ್ ಮೂಲಕ ಮಾನಸಿಕ ಬೆಳವಣಿಗೆಗೆ ಅವಕಾಶ ಕಲ್ಪಿಸಬೇಕು ಎಂದ ಅಂತಕರಣ, ಬೆಳವಣಿಗೆಗೆ ಪೂರಕ ಅಗತ್ಯ ಅಂಶಗಳನ್ನು ಸ್ವೀಕರಿಸುವಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಚಿಂತನೆ ಹರಿಸಬೇಕು ಎಂದರು.
ಪ್ರಥಮ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ ವಿ.ಡಿ.ಸಿಂಚನಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ. ಈ ಮೂಲಕ ಭಾಷೆಯ ಹಿರಿಮೆ, ಸಂಸ್ಕøತಿ, ಆಚಾರ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಿದಲ್ಲಿ ಕನ್ನಡ ಭಾಷೆಯನ್ನು ಬೆಳೆಸಲು ಸಾಧ್ಯವಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಮಕ್ಕಳಲ್ಲಿ ಕನ್ನಡತನ ಉಳಿಸುವ ಬಗ್ಗೆ ವಿಚಾರಧಾರೆ ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಸಾಹಿತ್ಯ ಪರಿಷತ್ ವಿದ್ಯಾರ್ಥಿಗಳ ಪ್ರೇರಕ ಶಕ್ತಿಯಾಗಿ, ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬೇಕು ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಪ್ರಾಸ್ತಾವಿಕ ನುಡಿಗಳಾಡಿ, ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ದಿಸೆಯಲ್ಲಿ ಈ ಕಾರ್ಯಕ್ರಮ ಸಹಕರಿಯಾಗಲಿದೆ. ಈ ಮೂಲಕ ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಪರಿಷತ್ ಮುಂದಾಗಿದೆ ಎಂದರು.
ಕೊಡಗು ಜಿಲ್ಲಾ ಪಂಚಾಯ್ತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ, ಸದಸ್ಯ ಲತೀಫ್, ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ಭಾರತಿ ಮಾತನಾಡಿ, ಸಮ್ಮೇಳನಕ್ಕೆ ಶುಭಾಶಯ ಕೋರಿದರು.
ಮುಖ್ಯ ಅತಿಥಿಗಳಾಗಿ ಕೊಡಗು ಲೇಖಕರ ಬಳಗದ ಅಧ್ಯಕ್ಷ ಕೇಶವ ಕಾಮತ್, ಕಸ್ತೂರಿ ಗೋವಿಂದಮ್ಮಯ್ಯ, ತಾಲೂಕು ಪಂಚಾಯ್ತಿ ಸದಸ್ಯೆ ಪುಷ್ಪಾ, ಮೊರಾರ್ಜಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಭಾಷ್ ನಾಣಯ್ಯ, ಮಾಧ್ಯಮ ಕಾರ್ಯದರ್ಶಿ ಅಶ್ವಥ್‍ಕುಮಾರ್, ತಾಲೂಕು ಅಧ್ಯಕ್ಷರುಗಳಾದ ಕುಡೆಕಲ್ ಸಂತೋಷ್, ಎಸ್.ಡಿ.ವಿಜೇತ್, ಜಿಲ್ಲಾ ಸಮಿತಿ ಸದಸ್ಯ ಕೆ.ಕೆ. ನಾಗರಾಜಶೆಟ್ಟಿ, ಹೋಬಳಿ ಘಟಕದ ಅಧ್ಯಕ್ಷರುಗಳು, ಪದಾಧಿಕಾರಿಗಳು ಇದ್ದರು.
ಸಮ್ಮೇಳನಕ್ಕೂ ಮುನ್ನ ರಾಷ್ಟ್ರಧ್ವಜವನ್ನು ಸೋಮವಾರಪೇಟೆ ತಹಶೀಲ್ದಾರ್ ಟಿ.ಎಸ್.ಮಹೇಶ್ ಆರೋಹಣ ಮಾಡಿದರು. ಪರಿಷತ್ ಧ್ವಜವನ್ನು ಡಿವೈಎಸ್ಪಿ ಪಿ.ಕೆ.ಮುರಳೀಧರ್, ನಾಡಧ್ವಜವನ್ನು ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಆರೋಹಿಸಿದರು. ಪ್ರಮುಖ ದ್ವಾರಗಳ ಉದ್ಘಾಟನೆಯನ್ನು ಬಸವನಹಳ್ಳಿ ಸರಕಾರಿ ಶಾಲಾ ವಿದ್ಯಾರ್ಥಿಗಳು, ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿಗಳು ನೆರವೇರಿಸಿದರು. ಆಶ್ರಮ ಶಾಲಾ ವಿದ್ಯಾರ್ಥಿಗಳು ಚಿಣ್ಣರ ಭವನ ಉದ್ಘಾಟಿಸಿದರು. ಅಂತಕರಣ ಅವರನು ಸನ್ಮಾನಿಸಲಾಯಿತು. ಈ ಸಂದರ್ಭ ಸೋಮವಾರಪೇಟೆಯ ವಿದ್ಯಾರ್ಥಿಗಳಾದ ಕು.ಪ್ರಣವ್ ಎಸ್.ಕಶ್ಯಪ್ ಇದ್ದರು. ಕಸಾಪ ನಿರ್ದೇಶಕರಾದ ಫಿಲಿಪ್‍ವಾಸ್ ಕಾರ್ಯಕ್ರಮ ನಿರ್ವಹಿಸಿದರು, ಮೇಘನ ಮತ್ತು ತಂಡ ನಾಡಗೀತೆ, ಅನುಷಾ ತಂಡ ರೈತ ಗೀತೆ ಹಾಡಿದರು.
ಕಸಾಪ ಹೋಬಳಿ ಘಟಕ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ಸ್ವಾಗತಿಸಿದರು, ಹರ್ಷಿತ್ ನಿರೂಪಿಸಿದರು, ಉತ್ತಮ್ ವಂದಿಸಿದರು.