ಸಿದ್ದಾಪುರ, ಜ.29: ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬ ಶಾಹ್-ವಲಿಯವರ ಉರೂಸ್ (ನೇರ್ಚೆ) ಫೆಬ್ರವರಿ 2 ರಿಂದ 5ರ ವರೆಗೆ ನಡೆಯಲಿದೆ ಎಂದು ಪಾಲಿಬೆಟ್ಟ ಜಮಾಅತ್ ಸಮಿತಿ ಅಧ್ಯಕ್ಷ ಸಿ.ಎಂ ಅಬ್ದುಲ್ ಜಬ್ಬಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ತಾ 2 ರಂದು ಅಪರಾಹ್ನ 2 ಗಂಟೆಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವದು. ಬಳಿಕ ಕಾರ್ಯಕ್ರಮವನ್ನು ಜುಮಾ ಮಸೀದಿ ಖತೀಬ್ ಅಲಿ ಸಖಾಫಿ ಉದ್ಘಾಟಿಸಲಿದ್ದಾರೆ.
ತದಾನಂತರ ಕೊಡಂಗಲ್ಲೂರು ಪಿ.ಎಂ.ಎಸ್ ತಂಙಳ್ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಮತ್ತು ದುಆ ನಡೆಯಲಿದೆ. ರಾತ್ರಿ 8 ಗಂಟೆಗೆ ಅಲಿ ಸಖಾಫಿ ಅವರಿಂದ ಧಾರ್ಮಿಕ ಉಪನ್ಯಾಸ, ರಾತ್ರಿ 10 ಗಂಟೆಗೆ ಶೈಖುನಾ ಮೂರಿಯಾಡ್ ಉಸ್ತಾದ್ ನೇತೃತ್ವದಲ್ಲಿ ಧಿಖ್ರ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ತಾ 3 ರಂದು ರಾತ್ರಿ 8:30ಕ್ಕೆ ಕೊಲ್ಲಂನ ಸಯ್ಯಿದ್ ಅಸ್ಬುಲ್ಲಾ ಬಾಫಖಿ ಅವರಿಂದ ಧಾರ್ಮಿಕ ಉಪನ್ಯಾಸ, ತಾ 4 ರಂದು ರಾತ್ರಿ 8:30ಕ್ಕೆ ಓಟಪಡವ್ ಹಂಸ ಮಿಸ್‍ಬಾಹಿ ಅವರಿಂದ ಉಪನ್ಯಾಸ, ತಾ 5 ರಂದು ಸಂಜೆ 6 ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಎಡಪಾಲದ ಕೆ.ಎ ಮಹಮ್ಮೂದ್ ಮುಸ್ಲಿಯಾರ್ ವಹಿಸಲಿದ್ದಾರೆ.
ಮುಖ್ಯ ಭಾಷಣಗಾರರಾಗಿ ಅರಮೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಸಂತ ಜೋಸೆಫರ ಚರ್ಚ್ ಧರ್ಮಗುರು ರೆ|| ಫಾ. ಪಿ. ಜೋನಾಸ್, ಪುತ್ತೂರಿನ ಕುಂಬ್ರ ಕೆ.ಐ.ಸಿ.ಯ ಪ್ರೊ. ಅನೀಸ್ ಕೌಸರಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್ ಸೀತಾರಾಂ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಆಹಾರ ಮತ್ತು ನಾಗರಿಕ ಸೇವಾ ಸಚಿವ ಯು.ಟಿ ಖಾದರ್, ಸಚಿವರಾದ ರೋಷನ್ ಬೇಗ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಜಿ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಂ.ಕೆ ವಿಜು ಸುಬ್ರಮಣಿ, ಜಿ.ಪಂ ಸದಸ್ಯ ಪಿ.ಎಂ ಲತೀಫ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಕೆ.ಎ ಯಾಕೂಬ್, ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಪಿ.ಸಿ ಹಸೈನಾರ್ ಹಾಜಿ, ಮಾಜಿ ಶಾಸಕ ಅರುಣ್ ಮಾಚಯ್ಯ, ತಾ.ಪಂ ಸದಸ್ಯ ಅಜಿತ್ ಕರುಂಬಯ್ಯ, ಗ್ರಾ.ಪಂ ಅಧ್ಯಕ್ಷರುಗಳಾದ ಪಿ.ಪಿ ಬೋಪಣ್ಣ ಹಾಗೂ ಕೊಲ್ಲೀರ ಗೋಪಿ, ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ರೆಹಮಾನ್ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಮಿತಿ ಸದಸ್ಯ ಕೆ.ಎ ಅಬ್ದುಲ್ ರಶೀದ್ ಮಾತನಾಡಿ, ಜಾತಿ, ಮತ, ಭೇದವಿಲ್ಲದೆ ಆಚರಿಸಿಕೊಂಡು ಬರುತ್ತಿರುವ ಆರ್ಕಾಡ್ ಪಟ್ಟಾಣ್ ಬಾಬಾ ಶಾಹ್-ವಲಿ ಅವರ ಉರೂಸ್ ಇತಿಹಾಸ ಪ್ರಸಿದ್ದವಾಗಿದ್ದು, ಕಾರ್ಯಕ್ರಮದ ಪ್ರತಿ ದಿನ ರಾತ್ರಿ ಮದ್ರಸ ವಿದ್ಯಾರ್ಥಿಗಳಿಂದ ದಫ್ ಹಾಗೂ ಬುರ್ದಾ ಕಾರ್ಯಕ್ರಮ ನಡೆಯಲಿದೆ. ತಾ 5 ರಂದು ಸಂಜೆ 6:30ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ಕಾರ್ಯಕ್ರಮಕ್ಕೆ ಜಾತಿ, ಮತ, ಭೇದವಿಲ್ಲದೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.