ಕೂಡಿಗೆ, ಜ. 29: ಬಾಣಾವಾರ ಅರಣ್ಯದಂಚಿನಿಂದ ಬಂದಿರುವ ಕಾಡಾನೆಗಳು ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮ ವ್ಯಾಪ್ತಿಯ ಜಮೀನುಗಳಿಗೆ ಕಳೆದ ಎರಡು ದಿನಗಳಿಂದ ಧಾಳಿ ಮಾಡಿ ಬೆಳೆಗಳನ್ನು ನಾಶಪಡಿಸಿವೆ. ಸ್ಥಳೀಯ ರೈತರಾದ ಚಂದ್ರಪ್ಪ, ಗಂಗಾಧರಯ್ಯ, ನಾಗರಾಜ, ಮಲ್ಲೇಶ್ ಇವರ ಜಮೀನುಗಳಲ್ಲಿ ಬೆಳೆಸಲಾಗಿದ್ದ ಬಾಳೆ, ಕೇನೆ ಇನ್ನಿತರ ಬೆಳೆಗಳನ್ನು ತುಳಿದು ನಷ್ಟ ಪಡಿಸಿವೆ.

ಕಾಡಾನೆಗಳು ದಾಟದ ಹಾಗೆ ಅರಣ್ಯದಂಚಿನಲ್ಲಿ ಈಗಾಗಲೇ ಅರಣ್ಯ ಇಲಾಖೆಯ ವತಿಯಿಂದ ಕಂದಕವನ್ನು ತೋಡಿದ್ದರೂ ಕೆಲವು ಭಾಗಗಳಲ್ಲಿ ಬೃಹತ್ ಬಂಡೆಗಳು ಸಿಕ್ಕಿದ ಪರಿಗಣಾಮ ಆ ಜಾಗಗಳಲ್ಲಿ ಕಂದಕವನ್ನು ತೋಡಲಾಗಿಲ್ಲ. ಅದೇ ಜಾಗದಲ್ಲಿ ಕಲ್ಲಿನ ಮೇಲೆ ದಾಟುವ ಕಾಡಾನೆಗಳು ಅರಣ್ಯದಂಚಿನ ಗ್ರಾಮಗಳಿಗೆ ನುಗ್ಗಿ ಬೆಳೆಗಳನ್ನು ನಷ್ಟಪಡಿಸಿವೆ.

ನೂರಾರು ರೈತರು ಕಣಿವೆಯ ಉಪ ಅರಣ್ಯ ಕಛೇರಿಯ ಅಧಿಕಾರಿಗಳಿಗೆ ಈ ಬಗ್ಗೆ ಗಮನ ಸೆಳೆದು ಬೆಳೆ ಪರಿಹಾರವನ್ನು ನೀಡುವಂತೆ ಒತ್ತಾಯಿಸಿದರು. ಇಂದು ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಕಾಂತ್ ಅವರು ಸೀಗೆಹೊಸೂರು ಗ್ರಾಮದಲ್ಲಿ ಕಾಡಾನೆಯಿಂದ ನಷ್ಟಕ್ಕೊಳಗಾದವರ ಜಮೀನಿಗೆ ತೆರಳಿ ಸ್ಥಳ ಪರಿಶೀಲಿಸಿ, ಶೀಘ್ರದಲ್ಲೇ ಬೆಳೆ ಪರಿಹಾರ ಒದಲಾಗಿಸಲಾಗುವದು ಎಂದರು.

ಲಕ್ಷ್ಮೀಕಾಂತ್ ಅವರು ಗ್ರಾಮಸ್ಥರ ಮನವಿ ಸ್ವೀಕರಿಸಿ ಮಾತನಾಡಿ, ಕಳೆದ 6 ತಿಂಗಳಿನಿಂದ ಕಂದಕಗಳನ್ನು ತೆಗೆಯುವ ಸಂದರ್ಭ ಅಡೆತಡೆಯಾಗಿದ್ದ ಬಂಡೆಕಲ್ಲನ್ನು ಸಿಡಿಸಿ ತೆಗೆಯಲು ಅನುಮತಿ ದೊರೆತಿದ್ದು ನಾಳೆಯಿಂದಲೇ ಇಲಾಖೆ ಮತ್ತು ಗುತ್ತಿಗೆದಾರರು ಕಾರ್ಯೋನ್ಮುಖರಾಗುತ್ತೇವೆ. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಕಾಡಾನೆ ಲಗ್ಗೆಯಿಡದಂತೆ ಇನ್ನೂ ಕಂದಕ ತೆಗೆಯಲಾಗುವದು ಎಂದು ಭರವಸೆ ನೀಡಿದರು.

ಈ ಸಂದರ್ಭ ರೈತ ಒಕ್ಕೂಟದ ಅಧ್ಯಕ್ಷ ಜಯಪ್ಪ, ಕೂಡಿಗೆ ಗ್ರಾಮ ಪಂಚಾಯ್ತಿ ಸದಸ್ಯ ಟಿ.ಕೆ.ವಿಶ್ವನಾಥ್, ಪ್ರಗತಿಪರ ರೈತ ಕೆ.ಸಿ.ನಂಜುಂಡಸ್ವಾಮಿ, ಚಂದ್ರಪ್ಪ, ಗಂಗಾಧರಯ್ಯ, ಕೃಷ್ಣೇಗೌಡ, ಹರದಯ್ಯ ಸೇರಿದಂತೆ ರೈತರು, ಉಪವಲಯ ಅರಣ್ಯಾಧಿಕಾರಿ ಸತೀಶ್, ಸಿಬ್ಬಂದಿ ಇದ್ದರು.