ಮಡಿಕೇರಿ, ಜ. 29: ಕೊಡಗು ಜಿಲ್ಲೆಯ ಕಾಫಿ ಇಳುವರಿಯಲ್ಲಿ ಈ ಬಾರಿ ಶೇ. 45 ರಿಂದ 80 ರಷ್ಟು ಕೊರತೆ ಉಂಟಾಗಿ ಬೆಳೆಗಾರರು ನಷ್ಟ ಅನುಭವಿಸುತ್ತಿರುವದರಿಂದ ಸರ್ಕಾರ ಬೆಳೆಗಾರರ ಸಾಲವನ್ನು ಸಂಪೂರ್ಣ ವಾಗಿ ಮನ್ನಾ ಮಾಡಬೇಕೆಂದು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಡಾ. ಬಿ.ಎಂ. ಬೋಪಯ್ಯ ಹವಾಗುಣ ವೈಪರಿತ್ಯ, ವನ್ಯಜೀವಿಗಳ ಹಾವಳಿ, ಆಮದು-ರಫ್ತು ನೀತಿಯ ಗೊಂದಲ, ಕಾರ್ಮಿಕರ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಕೊಡಗಿನ ಕಾಫಿ ಬೆಳೆಗಾರರು ಎದುರಿಸುತ್ತಿದ್ದು, ಇದೀಗ ದಾಖಲೆಯ ಪ್ರಮಾಣದಲ್ಲಿ ಇಳುವರಿ ಕೊರತೆ ಕಂಡು ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾಫಿ ಮಂಡಳಿಯ ಅಂದಾಜಿನ ಪ್ರಕಾರ ಅರೆಬಿಕಾ ಕಾಫಿ ಶೇ.20 ರಷ್ಟು ಹಾಗೂ ರೋಬಸ್ಟ ಕಾಫಿ ಶೇ.10 ರಷ್ಟು ಹೆಚ್ಚಳವಾಗಬೇಕಾಗಿತ್ತು. ಆದರೆ ಜಿಲ್ಲೆಯ ವಿವಿಧೆಡೆಗಳಿಂದ ಬಂದ ಮಾಹಿತಿಯ ಪ್ರಕಾರ ಕಾಫಿ ಪಸಲಿನಲ್ಲಿ ಶೇ.45 ರಿಂದ ಶೇ.80 ರಷ್ಟು ಕೊರತೆ ಕಂಡು ಬಂದಿದೆ. ಕಳೆದ ವರ್ಷ ಎಕರೆಗೆ 26 ಚೀಲಗಳ ಬದಲಿಗೆ ನಾಲ್ಕು ಚೀಲ ಚೆರಿ ಮಾತ್ರ ಲಭ್ಯವಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 2017-18ರ ಅವಧಿಯಲ್ಲಿ ರೋಬಸ್ಟ ಉತ್ಪಾದನೆ ಶೇ.40 ರಿಂದ 60 ರಷ್ಟು ಕಡಿಮೆಯಾಗಿದೆ. ಕಾಫಿ ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗುತ್ತಿದ್ದು, ಕಳೆದ ಐದು ವರ್ಷಗಳಲ್ಲಿ ಕಾರ್ಮಿಕ ವೇತನ ಶೇ.76 ಕ್ಕಿಂತ
(ಮೊದಲ ಪುಟದಿಂದ) ಹೆಚ್ಚಾಗಿದೆ ಎಂದು ವಿವರಿಸಿದರು.
ಕಾಫಿ ಬೆಲೆ ಅಂತರರಾಷ್ಟ್ರಿಯ ಮಟ್ಟದಲ್ಲಿ ಇಳಿಕೆಯಾಗಿದೆ, ಅಲ್ಲದೆ ಕೆಲವು ಸಂದರ್ಭದಲ್ಲಿ ತಟಸ್ಥವೂ ಆಗಿದೆ. ವನ್ಯಜೀವಿಗಳ ಹಾವಳಿಯು ಹೆಚ್ಚಾಗಿದ್ದು, ಬೆಳೆಗಾರರು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚಿಗೆ ಸಕಲೇಶÀಪುರದಲ್ಲಿ ಸುಮಾರು 18 ಸಂಘ ಸಂಸ್ಥೆಗಳು ಸಭೆ ನಡೆಸಿ ಬೆಳೆಗಾರರ ಬೇಡಿಕೆಯ ಬಗ್ಗೆ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರಿಗೆ ಮನವಿ ನೀಡಲಾಗಿದೆ ಎಂದು ಡಾ. ಬಿ.ಎಂ.ಬೋಪಯ್ಯ ತಿಳಿಸಿದರು. ವಿದೇಶದಿಂದ ಕರಿಮೆಣಸು ಆಮದಾಗುತ್ತಿರುವದರಿಂದ ಭಾರತದ ಕರಿಮೆಣಸಿಗೆ ಬೆಲೆ ಹೆಚ್ಚಾಗುವ ನೀರಿಕ್ಷೆಗಳಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.
ಸಂಘದ ಮಾಜಿ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ ಮಾತನಾಡಿ ಕಾಡಾನೆ ಧಾಳಿ ಕಾಫಿ ಉದ್ದಿಮೆಗೆ ಬೆದರಿಕೆ ರೂಪದ ಸಮಸ್ಯೆಯಾಗಿದ್ದು, ಸರ್ಕಾರದ ಗಮನ ಸೆಳೆಯುವಲ್ಲಿ ನಾವುಗಳು ಸಫಲರಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬೆಳೆಗಾರರಿಗೆ ಮತ್ತು ಕಾರ್ಮಿಕರಿಗೆ ಜೀವ ಭದ್ರತೆ ಇಲ್ಲದಾಗಿದೆ. ಕಳೆದ ಮೂರು, ನಾಲ್ಕು ವರ್ಷಗಳಿಂದ ವನ್ಯಜೀವಿ ವಿಭಾಗದ ಸಿಸಿಎಫ್‍ಗೆ ಕಾಡಾನೆ ಹಾವಳಿ ಬಗ್ಗೆ ಮನವಿ ಸಲ್ಲಿಸುತ್ತಾ ಬಂದಿದ್ದರು ಸಮಸ್ಯೆ ಬಗೆಹರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು.
ಅರಣ್ಯ ಪ್ರದೇಶವನ್ನು ಸಮರ್ಪಕ ವಾಗಿ ನಿರ್ವಹಣೆ ಮಾಡಿದರೆ, ವನ್ಯಜೀವಿಗಳ ಉಪಟಳವನ್ನು ತಡೆಯಬಹುದಾಗಿದೆ ಎಂದು ಅಭಿಪ್ರಾಯ ಪಟ್ಟ ಅವರು ಕಾಫಿ ನೀರಾವರಿಗೆ ಉಚಿತ ವಿದ್ಯುತ್ ಸಂಪರ್ಕ ಹಾಗೂ ಇತರ ರೈತರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಕಾಫಿ ಬೆಳೆಗಾರರಿಗೂ ನೀಡಬೇಕೆಂದು ಒತ್ತಾಯಿಸಿದರು.
ಸಂಘದ ಸದಸ್ಯ ಮೋಹನದಾಸ್ ಮಾತನಾಡಿ ಕಳೆದ ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹವಾಗುಣದ ಏರುಪೇರಿನಿಂದಾಗಿ ದಾಖಲೆ ಪ್ರಮಾಣದಲ್ಲಿ ಫಸಲು ಇಳಿಮುಖ ವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಕಾಫಿ ಮಂಡಳಿಯನ್ನು ಮುಚ್ಚುವ ಪ್ರಸ್ತಾಪ ಕೇಳಿ ಬರುತ್ತಿದ್ದು, ಇದು ಸರಿಯಾದ ಕ್ರಮವಲ್ಲ. ಕಾಫಿ ಬೆಳೆಗಾರರಿಗೆ ಈ ಹಿಂದೆ ನೀಡಲಾಗುತ್ತಿದ್ದ ಸಹಾಯಧನ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಾಫಿ ಮಂಡಳಿಯ ಮೂಲಕವೇ ಮುಂದು ವರಿಸಬೇಕೆಂದು ಒತ್ತಾಯಿಸಿದರು.
ಆರ್‍ಟಿಸಿಯಲ್ಲಿ ಬೆಳೆಯನ್ನು ನಮೂದಿಸದೆ ಇರುವದರಿಂದ ಬ್ಯಾಂಕ್ ವ್ಯವಹಾರ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಬೆಳೆಗಾರರಿಗೆ ತೊಂದರೆಯಾಗುತ್ತಿದ್ದು, ಆರ್‍ಟಿಸಿ ಯಲ್ಲಿ ಬೆಳೆಯನ್ನು ಸೇರಿಸಲು ಕ್ರಮಕೈಗೊಳ್ಳಬೇಕೆಂದರು. ಮತ್ತೊಬ್ಬ ಮಾಜಿ ಅಧ್ಯಕ್ಷ ಸಿ.ಎಂ. ಪೆಮ್ಮಯ್ಯ ಮಾತನಾಡಿ ಸಾಲಮನ್ನಾ ಮಾಡದಿದ್ದರೆ ಬೆಳೆಗಾರರು ತ್ರಿಶಂಕು ಸ್ಥಿತಿ ಅನುಭವಿಸಬೇಕಾಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಕಾಫಿ ಮಂಡಳಿ ಸಮಗ್ರ ವಿಶ್ಲೇಷಣೆ ಮತ್ತು ಬೆಳೆಗಾರರ ಸಂಘ, ಸಂಸ್ಥೆಗಳಿಂದ ಮಾಹಿತಿ ಪಡೆದು ಅಂದಾಜು ಪಟ್ಟಿಯನ್ನು ತಯಾರಿ ಸುವದು ಸೂಕ್ತವೆಂದ ಪೆಮ್ಮಯ್ಯ, ಕಾಫಿ ಬೆಳೆಗಾರರಿಗೆ ಮೊದಲಿನಂತೆ ಸಬ್ಸಿಡಿ ಯೋಜನೆ ಯನ್ನು ಮುಂದುವರೆಸಬೇಕೆಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾಜಿ ಅಧ್ಯಕ್ಷರಾದ ಸಿ.ಪಿ. ಗಣಪತಿ ಹಾಗೂ ಸದಸ್ಯ ಎನ್.ಸಿ. ಕಾರ್ಯಪ್ಪ ಉಪಸ್ಥಿತರಿದ್ದರು.