ಮಡಿಕೇರಿ, ಜ. 28: ಆರು ದಿನಗಳ ಹಿಂದೆ ತೋಟದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭ ದಿಢೀರಾಗಿ ಅಲ್ಲಿಂದ ಪೇಟೆಗೆಂದು ಹೊರಟಿರುವ ವ್ಯಕ್ತಿಯೋರ್ವ ತನ್ನ ದ್ವಿಚಕ್ರ ವಾಹನ ಸಹಿತ ನಾಪತ್ತೆಯಾಗಿರುವ ಬಗ್ಗೆ ಆತನ ಪೋಷಕರು ತೀವ್ರ ಆತಂಕಗೊಂಡಿದ್ದಾರೆ.

ಇಲ್ಲಿಗೆ ಸಮೀಪದ ಮದೆನಾಡು ನಿವಾಸಿ, ನಡುಗಲ್ಲು ಸೋಮಣ್ಣ ಎಂಬವರ ಪುತ್ರ ಎನ್.ಎಸ್. ದೇವಿಪ್ರಸಾದ್ (39) ತಾ. 23 ರಂದು ಬೆಳಿಗ್ಗೆ 10.30ರ ಸುಮಾರಿಗೆ ಕೆಲಸಗಾರರೊಂದಿಗೆ ತನ್ನ ತೋಟದಲ್ಲಿ ಕಾಫಿ ಕುಯ್ಲು ನಿರ್ವಹಿಸುತ್ತಿದ್ದರೆಂದು ಗೊತ್ತಾಗಿದೆ.

ಈ ವೇಳೆ ತಾನು ಮಡಿಕೇರಿಗೆ ಹೋಗಿ ಕಾಫಿ ತುಂಬಿಸಲು ಚೀಲಗಳನ್ನು ತರುವದಾಗಿ ಆತನ ತಾಯಿ ಬಳಿ ತಿಳಿಸಿದ್ದು, ಮನೆಯಿಂದ ದ್ವಿಚಕ್ರ ವಾಹನದಲ್ಲಿ (ಕೆ.ಎ. 12 8331 ಬಜಾಜ್ ವಿಕ್ಟರ್) ತೆರಳಿದ್ದಾರೆ. ಅಂದಿನಿಂದ ಇದುವರೆಗೂ ಬೈಕ್ ಸಹಿತ ಈ ವ್ಯಕ್ತಿಯ ಸುಳಿವು ಲಭಿಸಿಲ್ಲವೆಂದು ಪೋಷಕರು ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಇದೀಗ ಆರು ದಿನಗಳು ಕಳೆದಿದ್ದರೂ ಕಾಣೆಯಾಗಿರುವ ಚಿದಾನಂದ ಹಾಗೂ ಬೈಕ್ ಬಗ್ಗೆ ಯಾವದೇ ಸುಳಿವು ಲಭಿಸದ ಕಾರಣ, ತಮ್ಮ ಬಂಧುಗಳು, ನೆಂಟರಿಷ್ಟರ ಸಹಿತ ಎಲ್ಲೆಡೆ ವಿಚಾರಿಸಿ ಕಂಗಾಲಾಗಿರುವ ಪೋಷಕರು ತೀವ್ರ ಆತಂಕಗೊಂಡು, ಮಗನ ಪತ್ತೆಗಾಗಿ ಪೊಲೀಸ್ ಇಲಾಖೆಯ ಮೊರೆ ಹೋಗಿದ್ದಾರೆ.

ಮದುವೆಗೆ ಪೋಷಕರು ತಯಾರಿಯಲ್ಲಿದ್ದಾಗಲೇ, ಈತ ತನ್ನ ಮೊಬೈಲ್ ಸಹಿತ ಎಲ್ಲವನ್ನು ಮನೆಯಲ್ಲೇ ಬಿಟ್ಟು ಬೈಕ್‍ನೊಂದಿಗೆ ಕಾಣೆಯಾಗಿರುವದು ಹಲವಷ್ಟು ಸಂಶಯ ಮೂಡಿಸಿರುವದಾಗಿ ತಿಳಿದು ಬಂದಿದೆ. ಈತನ ಸುಳಿವು ಲಭಿಸಿದರೆ, ಸಮೀಪದ ಪೊಲೀಸ್ ಠಾಣೆ ಅಥವಾ 9448071412ರಲ್ಲಿ ಸಂಪರ್ಕಿಸಲು ತಿಳಿಸಲಾಗಿದೆ.