ಮೂರ್ನಾಡು: ಇಲ್ಲಿಗೆ ಸಮೀಪದ ಚೇರಂಬಾಣೆ ರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ವಾರ್ಷಿಕೋತ್ಸವ ಸಮಾರಂಭವನ್ನು ನಿವೃತ್ತ ಮುಖ್ಯ ಶಿಕ್ಷಕಿ ಪೈತಾಡಿಯಂಡ ಹೊನ್ನಮ್ಮ ದೇವಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡಬೇಕಾದರೆ ಕೇವಲ ಶಿಕ್ಷಕರಿಂದ ಸಾಧ್ಯವಿಲ್ಲ. ಪೋಷಕರು ಮಕ್ಕಳ ಶಿಕ್ಷಣವನ್ನು ವೃದ್ಧಿಸಲು ಜೊತೆಗೂಡಬೇಕು. ಶಿಕ್ಷಕರಿಗೆ ತಾಯಿಯಂತೆ ತಾಳ್ಮೆಯ ಮನೋಭಾವನೆ ಇರಬೇಕು ಎಂದರು.

ಸುಂಟಿಕೊಪ್ಪ ಸ್ವಸ್ಥದ ನಿರ್ದೇಶಕಿ ತೇಲಪಂಡ ಆರತಿ ಸೋಮಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ವಿದ್ಯಾರ್ಥಿಗಳನ್ನು ಮಾನಸಿಕ, ಶಾರೀರಿಕ, ಸಾಮಾಜಿಕವಾಗಿ ಬೆಳೆಸುವಂತಹ ಪರಿಜ್ಞಾನ ಶಿಕ್ಷಕರು ಹೊಂದಿರಬೇಕು ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಸೆಟ್ಟಿಜನ ಸುಬ್ರಾಯ ಅಧ್ಯಕ್ಷತೆ ವಹಿಸಿದ್ದರು. ಇವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶಾಲಾ ವ್ಯವಸ್ಥಾಪಕ ನಾಟೋಳಂಡ ವಿಜು, ಶಾಲಾ ಮುಖ್ಯ ಶಿಕ್ಷಕ ಕೆ.ಎಸ್. ರಾಮಮೂರ್ತಿ, ಆಡಳಿತ ಮಂಡಳಿಯ ಕುಚ್ಚೆಟ್ಟಿರ ಕುಂಞಪ್ಪ, ಮೊಟ್ಟಿಯಂಡ ಸುಗು ತಮ್ಮಯ್ಯ ಇತರರು ಹಾಜರಿದ್ದರು. ಕಳೆದ ಸಾಲಿನಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.